ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ- 2

| Published : Apr 29 2024, 01:30 AM IST / Updated: Apr 29 2024, 10:28 AM IST

ಸಾರಾಂಶ

ಇದೇ ಮೊದಲ ಬಾರಿಗೆ ಪಿಯುಸಿ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಮಾಡುತ್ತಿದ್ದು, ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಇದ್ದು, ಜಿಪಂ ಸಿಇಒ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ

 ಕೋಲಾರ :  ಜಿಲ್ಲೆಯ 6 ಕೇಂದ್ರಗಳಲ್ಲಿ ಏ.29 ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-೨ ಗೊಂದಲಗಳಿಲ್ಲದಂತೆ ಸುಗಮವಾಗಿ ನಡೆಯಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ. ಏ.29 ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-2 ಹಿನ್ನೆಲೆಯಲ್ಲಿ ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿರುವ ಅವರು, ವಿಷಯವಾರು ಫಲಿತಾಂಶ ತಿರಸ್ಕರಿಸಿ ಅನೇಕ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದು, ಅಂತಹ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.ವೆಬ್ ಕಾಸ್ಟಿಂಗ್ 6 ಕೇಂದ್ರಗಳು

ಇದೇ ಮೊದಲ ಬಾರಿಗೆ ಪಿಯುಸಿ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಮಾಡುತ್ತಿದ್ದು, ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಇದ್ದು, ಜಿಪಂ ಸಿಇಒ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಒಂದು ಕೇಂದ್ರದಂತೆ ಒಟ್ಟು 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋಲಾರದಲ್ಲಿ ಸರ್ಕಾರಿ ಬಾಲಕರ ಪಿಯು ಕಾಲೇಜು, ಕೆಜಿಎಫ್ ಉರಿಗಾಂ ಪಿಯು ಕಾಲೇಜು, ಮುಳಾಗಿಲು ಬಾಲಕರ ಪಿಯು ಕಾಲೇಜು, ಶ್ರೀನಿವಾಸಪುರ ಬಾಲಕರ ಪಿಯು ಕಾಲೇಜು, ಬಂಗಾರಪೇಟೆ ಬಾಲಕಿಯರ ಪಿಯುಕಾಲೇಜು, ಮಾಲೂರಿನ ಬಾಲಕರ ಪಿಯು ಕಾಲೇಜುಗಳಲ್ಲಿ ಪರಿಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಸ್ಥಾನಿಕ ಜಾಗೃತದಳ

ಪರೀಕ್ಷಾ ನಕಲು,ಅವ್ಯವಹಾರ ತಡೆಯಲು ಕೇಂದ್ರ ಕಚೇರಿಯ 2 ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 1, ಉಪನಿರ್ದೇಶಕರ ನೇತೃತ್ವದಲ್ಲಿ ೧ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷೆ ನಡೆಯುವ ದಿನ ಬೆಳಗ್ಗೆ ೧೦-೧೫ ರಿಂದ ಮಧ್ಯಾಹ್ನ 1 - 30 ರವರೆಗೂ 200 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಪೋನ್, ಇ-ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಎಚ್ಚರಿಕೆ ನೀಡಿದ ಅವರು, ಎಲೆಕ್ಟ್ರಾನಿಕ್, ಮುಳ್ಳಿನ ಕೈಗಡಿಯಾರವನ್ನೂ ತರುವಂತಿಲ್ಲ, ಸೈಂಟಿಫಿಕ್ ಕ್ಯಾಲ್ಕುಲೇಟರ್‌ಗೂ ಅವಕಾಶವಿಲ್ಲ, ಆದರೆ ಸಾಮಾನ್ಯ ಕ್ಯಾಲ್ಕುಲೇಟರ್ ಬಳಸಲು ಅವಕಾಶವಿದೆ.