ಸಾರಾಂಶ
ಮತದಾನ ಪ್ರಕ್ರಿಯೆ ಆರಂಭವಾಗಲು ಇನ್ನೂ ಕೇವಲ 7 ದಿನಗಳು ಮಾತ್ರ ಬಾಕಿ ಇವೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೬೦ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮೂರು ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ.
ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳ ಸಭೆಯನ್ನು ಇಲ್ಲಿನ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಶಾಖೆಯಲ್ಲಿ ನಡೆಸಲಾಯಿತು.
ಸಹಾಯಕ ಚುನಾವಣಾಧಿಕಾರಿ ಬಿ.ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿ, ಮತದಾನ ಪ್ರಕ್ರಿಯೆ ಆರಂಭವಾಗಲು ಇನ್ನೂ ಕೇವಲ 7 ದಿನಗಳು ಮಾತ್ರ ಬಾಕಿ ಇವೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೬೦ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮೂರು ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ. ಸೆಕ್ಟರ್ ಅಧಿಕಾರಿಗಳಿಗೂ ಹಲವಾರು ಬಾರಿ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಲ್ಲರೂ ಜಾಗೃತೆವಹಿಸಬೇಕು. ನಿಮ್ಮ, ನಿಮ್ಮ ವ್ಯಾಪ್ತಿಯ ಮತಗಟ್ಟೆ ಕೇಂದ್ರ, ಅಲ್ಲಿನ ವ್ಯವಸ್ಥೆ, ಮತದಾರರ ಪಟ್ಟಿ, ಮೂಲಭೂತ ವ್ಯವಸ್ಥೆ ಹಾಗೂ ಚುನಾವಣಾ ಕಾರ್ಯ ನಿರ್ವಹಿಸಲು ಅವಶ್ಯವಿರುವ ದಾಖಲಾತಿಗಳನ್ನು ಮತಗಟ್ಟೆಗೆ ಹೋಗುವ ಮುನ್ನ ಸೆಕ್ಟರ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.ಚುನಾವಣೆ ಮತದಾನ ಪ್ರಕ್ರಿಯೆ ಮುಗಿಯುವ ತನಕ ಸೆಕ್ಟರ್ ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ಇರುತ್ತದೆ. ಚುನಾವಣಾ ಸಾಮಾಗ್ರಿಗಳನ್ನು ಸಂಬಂಧಪಟ್ಟ ಮತಗಟ್ಟೆ ಕೇಂದ್ರಗಳು, ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ಸಿಬ್ಬಂದಿ ವರ್ಗ ಸಮಯಕ್ಕೆ ಸರಿಯಾಗಿ ಆಗಮಿಸಿ ನಿಗದಿಪಡಿಸಿ ವಸ್ತುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಿದೆ. ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಅವರಿಗೆ ಮಾರ್ಗದರ್ಶನ ನೀಡಬೇಕು ಎಂದರು.
ತಹಸೀಲ್ದಾರ್ ರೇಹಾನ್ ಪಾಷ, ಬಿಇಒ ಕೆ.ಎಸ್.ಸುರೇಶ್, ಚುನಾವಣಾ ಶಿರಸ್ತೇದಾರ್ ಹಸೀನಾ ಬೇಗಂ, ಶ್ರೀಧರ, ಓಬಳೇಶ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗ ಪ್ರಕಾಶ್, ಡಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.