ಭದ್ರತಾ ಠೇವಣಿ ತೆರಿಗೆ ಅಲ್ಲ: ಬೆಸ್ಕಾಂ

| Published : Jul 23 2024, 12:35 AM IST

ಸಾರಾಂಶ

ಹೆಚ್ಚುವರಿ ಭದ್ರತಾ ಠೇವಣಿಯು ಗ್ರಾಹಕರ ಹೆಸರಿನಲ್ಲಿ ಬೆಸ್ಕಾಂ ಬಳಿ ಇರುವ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೇ ಬಡ್ಡಿಯ ಲಾಭಾಂಶ ನೀಡಲಾಗುತ್ತದೆ. ಹೀಗಾಗಿ ಇದು ಬೆಸ್ಕಾಂನ ಶುಲ್ಕವಲ್ಲ’. ಗೊಂದಲ ಬೇಡ

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ಬೆಸ್ಕಾಂ ಗ್ರಾಹಕರ ವಿದ್ಯುತ್‌ ಶುಲ್ಕದ ಬಿಲ್‌ನಲ್ಲಿ ಕಳೆದ ವರ್ಷದ ಹೆಚ್ಚುವರಿ ವಿದ್ಯುತ್‌ ಬಳಕೆಗೆ ಅನುಗುಣವಾಗಿ ವಿಧಿಸಿರುವ ‘ಹೆಚ್ಚುವರಿ ಭದ್ರತಾ ಠೇವಣಿ’ಯು (ಎಎಸ್‌ಡಿ) ಯಾವುದೇ ರೀತಿಯ ತೆರಿಗೆ ಅಥವಾ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ವಿದ್ಯುತ್‌ ಶುಲ್ಕವಲ್ಲ’ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

ಬದಲಿಗೆ, ‘ಈ ಹೆಚ್ಚುವರಿ ಭದ್ರತಾ ಠೇವಣಿಯು ಗ್ರಾಹಕರ ಹೆಸರಿನಲ್ಲಿ ಬೆಸ್ಕಾಂ ಬಳಿ ಇರುವ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೇ ಬಡ್ಡಿಯ ಲಾಭಾಂಶ ನೀಡಲಾಗುತ್ತದೆ. ಹೀಗಾಗಿ ಇದು ಬೆಸ್ಕಾಂನ ಶುಲ್ಕವಲ್ಲ’ ಎಂದು ಸ್ಪಷ್ಟಪಡಿಸಿದೆ.

ಬಳಕೆಗೆ ಅನುಗುಣ ಭದ್ರತಾ ಠೇವಣಿ

‘ಕೆಇಆರ್‌ಸಿ ನಿಯಮಗಳ ಪ್ರಕಾರ ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ ವಾರ್ಷಿಕ ಸರಾಸರಿ ಬಳಕೆ ಆಧರಿಸಿ ಭದ್ರತಾ ಠೇವಣಿ ಮೊತ್ತ ನಿರ್ಧರಿಸಲಾಗುತ್ತದೆ. ನೂತನ ಗ್ರಾಹಕರಿಗೆ ವಿದ್ಯುತ್‌ ಬೇಡಿಕೆ ಆಧರಿಸಿ ಭದ್ರತಾ ಠೇವಣಿ ವಿಧಿಸಲಾಗುತ್ತದೆ. ಮುಂದಿನ ವರ್ಷಗಳಿಂದ ಹಿಂದಿನ ವಾರ್ಷಿಕ ಸರಾಸರಿ ಬಳಕೆ ಆಧರಿಸಿ ಹೆಚ್ಚುವರಿ ಭದ್ರತಾ ಠೇವಣಿ ವಿಧಿಸಬೇಕೆ ಅಥವಾ ಅವರ ವಿದ್ಯುತ್‌ ಬೇಡಿಕೆ ಕಡಿಮೆಯಿದ್ದಲ್ಲಿ ಗ್ರಾಹಕರಿಗೆ ಮರು ಪಾವತಿ ಮಾಡಬೇಕೇ ಎಂಬುದನ್ನು ಬೆಸ್ಕಾಂ ನಿರ್ಧರಿಸುತ್ತದೆ’ ಎಂದು ಹೇಳಿದೆ.

ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ, ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರಿಗೆ ಅವರ ಖಾತೆಯಲ್ಲೇ ಭದ್ರತಾ ಠೇವಣಿಯ ಬಡ್ಡಿ ಹಣ ಜಮಾ ಆಗಿರುತ್ತದೆ. ಗ್ರಾಹಕರು ಶೂನ್ಯ ಬಿಲ್‌ನಿಂದ ಹೊರಬಂದಾಗ, ಅವರ ಖಾತೆಯಲ್ಲಿ ಜಮೆಯಾಗಿರುವ ಬಡ್ಡಿಯ ಹಣವನ್ನು ವಿದ್ಯುತ್ ಶುಲ್ಕದೊಂದಿಗೆ ಹೊಂದಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಕುರಿತು ಯಾವುದೇ ಗೊಂದಲಗಳು ಇದ್ದರೆ ಬೆಸ್ಕಾಂನ 24/7 ಸಹಾಯವಾಣಿ 1912 ಕ್ಕೆ ಕರೆ ಮಾಡಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.