ನರಗುಂದ ತಾಲೂಕಿನಲ್ಲಿ ಹಿಂಗಾರು ಬಿತ್ತನೆಗೆ ಬಾರದ ಬೀಜ!

| Published : Sep 30 2025, 12:00 AM IST

ನರಗುಂದ ತಾಲೂಕಿನಲ್ಲಿ ಹಿಂಗಾರು ಬಿತ್ತನೆಗೆ ಬಾರದ ಬೀಜ!
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಬಿಳಿಜೋಳ 4300 ಹೆ., ಗೋದಿ 3500 ಹೆ., ಕಡಲೆ 20700 ಹೆ., ಕುಸುಬೆ 100 ಹೆ., ಸೂರ್ಯಕಾಂತಿ 8645 ಹೆಕ್ಟೇರ್‌ ಸೇರಿ ಒಟ್ಟು 37245 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪ್ರಸಕ್ತ ಹಿಂಗಾರು ಹಂಗಾಮಿನ ಬಿತ್ತನೆಗೆ ಕ್ಷಣಗಣನೆ ಆರಂಭವಾಗಿದ್ದು, ಆದರೆ ರೈತರಿಗೆ ಸರ್ಕಾರವು ಸಹಾಯಧನದಡಿ ನೀಡುವ ಬಿತ್ತನೆ ಬೀಜವನ್ನು ಕೃಷಿ ಇಲಾಖೆಗೆ ಇನ್ನೂವರೆಗೂ ಪೂರೈಕೆ ಮಾಡಿಗಿಲ್ಲ. ಹೀಗಾಗಿ ತಾಲೂಕಿನ ರೈತರು ಆತಂಕಗೊಂಡಿದ್ದಾರೆ.

ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಗೋವಿನಜೋಳ ಇತರ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣವಾಗಿ ಹಾನಿಯಾಗಿವೆ. ಹಿಂಗಾರು ಹಂಗಾಮಿನಲ್ಲಾದರೂ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿ ಉತ್ತಮ ಬೆಳೆ ತೆಗೆಯುವ ಕಾತರದಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಾರಣ ಸರ್ಕಾರದಿಂದ ಸಹಾಯಧನದಲ್ಲಿ ನೀಡುವ ಬೀಜಗಳು ರೈತ ಸಂಪರ್ಕ ಕೇಂದ್ರಕ್ಕೆ ಬಂದಿಲ್ಲ. ರೈತರು ಬೀಜ ಖರೀದಿ ಮಾಡಲು ರೈತ ಸಂಪರ್ಕ ಕೇಂದ್ರಕ್ಕೆ ಪ್ರತಿದಿನ ಅಲೆದಾಡುವಂತಾಗಿದೆ.

ಹಿಂಗಾರು ಬಿತ್ತನೆ ಗುರಿ: ತಾಲೂಕಿನಲ್ಲಿ ಬಿಳಿಜೋಳ 4300 ಹೆ., ಗೋದಿ 3500 ಹೆ., ಕಡಲೆ 20700 ಹೆ., ಕುಸುಬೆ 100 ಹೆ., ಸೂರ್ಯಕಾಂತಿ 8645 ಹೆಕ್ಟೇರ್‌ ಸೇರಿ ಒಟ್ಟು 37245 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಬಿತ್ತನೆ ಬೀಜದ ಬೇಡಿಕೆ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳ- 322.5 ಕೆಜಿ, ಗೋದಿ- 5250 ಕ್ವಿಂಟಲ್, ಕಡಲೆ- 10350 ಕ್ವಿಂಟಲ್, ಕುಸಬೆ-13 ಕ್ವಿಂಟಲ್, ಸೂರ್ಯಕಾಂತಿ- 432.25 ಕೆಜಿ ಸೇರಿ ಒಟ್ಟು 16367 ಕ್ವಿಂಟಲ್ ಬಿತ್ತನೆ ಬೀಜಗಳ ಅವಶ್ಯಕತೆ ಇದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಬಿತ್ತನೆಗೆ ಹಿನ್ನಡೆ: ಪ್ರತಿವರ್ಷ ಈ ಭಾಗದಲ್ಲಿ ಮಹಾನನಮಿ ಹಬ್ಬದ ನಂತರ ರೈತರು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಾರಂಭಿಸುವ ವಾಡಿಕೆ ಇದೆ. ಬಿತ್ತನೆಗೆ ಸಮಯಾವಕಾಶವೂ ಕಡಿಮೆ ಇದೆ. ಈ ನಡುವೆ ಸರ್ಕಾರ ರೈತರಿಗೆ ಸಹಾಯಧನದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಿಲ್ಲ. ಇದರಿಂದ ರೈತ ಸಮುದಾಯಕ್ಕೆ ದಿಕ್ಕು ತೋಚದಂತಾಗಿದೆ.

ಪ್ರತಿವರ್ಷ ಹಿಂಗಾರು ಬಿತ್ತನೆಗೆ ಬೇಕಾಗುವ ಬೀಜಗಳನ್ನು 15 ದಿನಗಳ ಮುಂಚಿತವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹ ಇರುತ್ತಿದ್ದವು. ಆದರೆ ಈ ವರ್ಷ ಬಿತ್ತನೆ ದಿನ ಹತ್ತಿರ ಬಂದರೂ ಬೀಜ ಪೂರೈಕೆ ಮಾಡದಿರುವುದು ವಿಷಾದನೀಯ ಎಂದು ರೈತ ಬಸವರಾಜ ಹಡಪದ ತಿಳಿಸಿದರು.

ಆಗ್ರಹ: ಈಗಾಗಲೇ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ಹಾನಿ ಮಾಡಿಕೊಂಡು ತೊಂದರೆಯಲ್ಲಿದ್ದಾರೆ. ಇದೀಗ ಹಿಂಗಾರು ನಿರೀಕ್ಷೆಯಲ್ಲಿ ರೈತರಿದ್ದಾರೆ. ಹಿಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳನ್ನು ಕೂಡಲೇ ಪೂರೈಕೆ ಮಾಡಬೇಕು ಎಂದು ರೈತಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.ಪೂರೈಕೆಗೆ ಕ್ರಮ: ತಾಲೂಕಿನಲ್ಲಿ ಬಿತ್ತನೆ ಮಾಡುವ ಪ್ರದೇಶ ಮತ್ತು ಬಿತ್ತನೆ ಮಾಡಲು ಬೀಜದ ಬೇಡಿಕೆ ಬಗ್ಗೆ ಮೇಲಧಿಕಾರಿಗಳಗೆ ಮಾಹಿತಿಯನ್ನು ಕಳಿಸಿದ್ದೇವೆ. ಬಿತ್ತನೆ ಬೀಜ ಬಂದ ತಕ್ಷಣ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಿಳಿಸಿದರು.