ಸಾರಾಂಶ
ಅರಿವು ಕಾರ್ಯಕ್ರಮ । ವ್ಯಕ್ತಿತ್ವ ಬೆಳವಣಿಗೆ, ಜೀವನ ಕೌಶಲ್ಯ ಮಾಹಿತಿ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಸ್ವಯಂ ಅರಿವಿನಿಂದ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಹಾಗೂ ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿ ಹೇಳಿದರು.
ಸ್ವಯಂ ಅರಿವಿನಿಂದ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಹಾಗೂ ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿ ಹೇಳಿದರು. ಗುಂಡ್ಲುಪೇಟೆಯಲ್ಲಿ ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಕುರಿತ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಮತ್ತು ಮೊರಾರ್ಜಿ ವಸತಿ ಶಾಲೆ ಜಂಟಿಯಾಗಿ ಹಮ್ಮಿಕೊಂಡ ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಕುರಿತ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಯನದಿಂದ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಅದಕ್ಕೆ ಬೇಕಾದ ಏಕಾಗ್ರತೆಯನ್ನು ಆಧ್ಯಾತ್ಮ ನೀಡುತ್ತದೆ. ಆಧ್ಯಾತ್ಮವು ಮೊಬೈಲ್ ಚಾರ್ಜ್ ಮಾಡಿದಂತೆ, ಚಾರ್ಜ್ ಕಾಣುವುದಿಲ್ಲ. ಆದರೆ, ಅದರಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂದರು.
ಮಾನಸಿಕ ಶಾಂತಿ ಇಲ್ಲದಿದ್ದರೆ, ಒಂದು ಕೆಲಸಕ್ಕೆ ನಾಲ್ಕುಪಟ್ಟು ಸಮಯ ವ್ಯರ್ಥವಾಗುತ್ತದೆ. ಶಾಂತಿ ಹೊಂದಿದಾಗ, ಒಂದು ಗಂಟೆಯ ಕೆಲಸವನ್ನು 10 ನಿಮಿಷದಲ್ಲಿ ಪೂರೈಸಬಹುದು. ಇದೇ ಆಂತರಿಕ ಸಶಕ್ತೀಕರಣ ಎಂದು ತಿಳಿಸಿದರು.ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತೇವೆ. ಅಂತಹಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಶಕ್ತಿ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಸ್ವಯಂ ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಪ್ರತಿಯೊಬ್ಬ ಪಾಲಕರು ನಾನು ರಾಷ್ಟ್ರದ ಆಧಾರಸ್ತಂಭವನ್ನು ನಿರ್ಮಿಸುತ್ತಿದ್ದೇನೆ ಎಂಬ ವ್ಯಾಪಕ ದೃಷ್ಟಿಕೋನವನ್ನು ಇಟ್ಟುಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ವ್ಯಕ್ತಿತ್ವ ವಿಕಸನದಿಂದ ಮಕ್ಕಳು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದು ಸ್ನೇಹಿತರನ್ನು ಆಯ್ಕೆ ಮಾಡಲು ಮತ್ತು ಸಂಬಂಧಗಳನ್ನು ನಿರ್ಮಿಸಲು ಅವಶ್ಯಕವಾಗಿದೆ. ಅವರ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ಮಿಸಲು ಮುಖ್ಯವಾಗಿದೆ. ವ್ಯಕ್ತಿಗಳು ಪ್ರತಿಯೊಬ್ಬ ಮಗು ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮಹಾದೇವ ಪ್ರಸಾದ್ ಮಾತನಾಡಿ, ಮಕ್ಕಳು ವ್ಯಾಸಂಗದ ಜತೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಬೇಕು. ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಸಮರ್ಥವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಭಾಗವಹಿಸಿ ಒಳ್ಳೆಯ ಹೆಸರು ಗಳಿಸಬೇಕು. ಇದರಿಂದ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಮನೆಗೆ ಹಳ್ಳಿಗೆ ಗೌರವ ತರುವ ಕಾರ್ಯ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಶಾಲೆಯ ಉದ್ಯಾನದಲ್ಲಿ ಬೆಳೆದ ಹೂ ಗಿಡಗಳಿಂದ ತಾವೇ ತಯಾರಿಸಿದ ಪುಷ್ಪಗುಚ್ಛವನ್ನು ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಶಿಕ್ಷಕರಾದ ಟಿ.ಎಸ್.ಮಂಜುಯುವ ಸ್ಪಂದನ ಗುರುರಾಜ್, ಮನೋಜ್‌ಕುಮಾರ್, ಓಂ ಶಾಂತಿ ನ್ಯೂಸ್ ಸರ್ವಿಸ್‌ನ ಬಿ.ಕೆ.ಆರಾಧ್ಯ ಇದ್ದರು.