ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸ್ವಯಂ ಉದ್ಯೋಗ ಮಾಡುವುದರಿಂದ ಸ್ವಾವಲಂಬಿ ಬದುಕು ಹಾಗೂ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಔದ್ಯಮಿಕ ಕೇಂದ್ರ ವಿಶೇಷ ಸುಧಾರಿತ ಉಪಕರಣಗಳ ಯೋಜನೆಯಡಿ ಕುಶಲಕರ್ಮಿಗಳಿಗೆ ಕಸುಬನ್ನು ಅಭಿವೃದ್ಧಿಪಡಿಸಲು ಹೊಲಗೆ ಯಂತ್ರ ಸೇರಿದಂತೆ ವಿವಿಧ ಕಸುಬುಗಳ ವಿಶೇಷ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಮಹಿಳೆಯರ ನಿಜವಾದ ಸಬಲೀಕರಣ ಸಾಧ್ಯ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಆಸಕ್ತಿಗನುಗುಣವಾದ ಒಂದೊಂದು ವೃತ್ತಿಯಲ್ಲಿ ತೊಡಗಿರಬೇಕು. ಆಗ ಮಾತ್ರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಪ್ರಾರಂಭಿಸಿವೆ.ಇದು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದೀಗ ಈ ಯೋಜನೆಯಡಿ ಸುಮಾರು ೪೨ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ದೊರೆಯಲಿದ್ದು, ಮಹಿಳೆಯರು ಆರ್ಥಿಕವಾಗಿ ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತ ಎಂಬ ಕಾಲ ಮರೆಯಾಗಿದೆ. ಮಹಿಳೆಯರೂ ಕೂಡ ಪುರುಷರಂತೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ವ್ಯಾಪಾರ, ಕೈಗಾರಿಕೆಯಂತಹ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿಯೂ ಉತ್ತಮ ಸ್ಥಾನಮಾನಗಳಿಸಿದ್ದಾರೆ.ಉದ್ಯೋಗ ಅವಕಾಶಗಳಿಂದ ವಂಚಿತರಾಗಿದ್ದವರಿಗೆ ಸ್ವಯಂ ಉದ್ಯೋಗ ಮಾಡುವುದಕ್ಕೆ ಇಂಥ ಯೋಜನೆಗಳು ನೆರವಾಗುತ್ತವೆ. ಬಡ, ಮಧ್ಯಮ ವರ್ಗದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅನುಕೂಲ ಮಾಡಿಕೊಡಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕುಶಲಕರ್ಮಿಗಳು ಪಡೆದ ಉಪಕರಣಗಳನ್ನು ಸದುಪ ಯೋಗಪಡಿಸಿಕೊಂಡು, ತಮ್ಮ ಜೀವನ ಮಟ್ಟ ಸುಧಾರಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಮುಂದೆ ಬರಬೇಕು. ಗ್ರಾಮೀಣ ಕುಶಲಕರ್ಮಿಗಳು ತಮ್ಮ ತಲೆತಲಾಂತರದಿಂದ ಬಂದಂತಹ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು. ಸರ್ಕಾರ ದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಹೊಲಿಗೆಯಂತ್ರ ೪೨, ಎಲೆಕ್ಟಿಕಲ್ ೧೫, ಬಡಗಿ ೫, ಗಾರೆ ೬ ಸೇರಿ ಒಟ್ಟು ೭೨, ಬೋರ್‌ವೆಲ್ ರಿಪೇರಿ ೪ ಜನರು ಸೇರಿ ಒಟ್ಟು ೭೨ ಜನರು ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಕೆ.ಎಸ್.ರವಿಪ್ರಸಾದ್ ಭಾಗವಹಿಸಿದ್ದರು.