ಸಾಮಾಜಿಕ ಕಾರ್ಯಕ್ರಮದಿಂದ ಆತ್ಮಕಲ್ಯಾಣ: ಡಾ. ತೋಂಟದ ಸಿದ್ಧರಾಮ ಶ್ರೀಗಳು

| Published : Nov 05 2024, 12:44 AM IST

ಸಾಮಾಜಿಕ ಕಾರ್ಯಕ್ರಮದಿಂದ ಆತ್ಮಕಲ್ಯಾಣ: ಡಾ. ತೋಂಟದ ಸಿದ್ಧರಾಮ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಋಣ, ತಂದೆ-ತಾಯಿ ಋಣ ಮತ್ತು ವಿದ್ಯೆ ಕಲಿಸಿದ ಗುರುಗಳ ಋಣ ಸಮಾಜದ ಪ್ರತಿ ವ್ಯಕ್ತಿಯ ಮೇಲೆ ಇರುತ್ತದೆ ಎಂದು ಶ್ರೀಗಳು ಹೇಳಿದರು.

ನರಗುಂದ: ಮಠಗಳಲ್ಲಿ ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಕಾರ್ಯಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣವಾಗುತ್ತದೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಶ್ರೀಗುರುಬಸವ ಸ್ವಾಮಿಗಳ ಮೊದಲ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.

ತೋಂಟದ ಶ್ರೀಗಳು ಸಮಾಜದ ಋಣ, ತಂದೆ-ತಾಯಿ ಋಣ ಮತ್ತು ವಿದ್ಯೆ ಕಲಿಸಿದ ಗುರುಗಳ ಋಣ ಸಮಾಜದ ಪ್ರತಿ ವ್ಯಕ್ತಿಯ ಮೇಲೆ ಇರುತ್ತದೆ. ಲಿಂಗೈಕ್ಯ ಗುರುಬಸವ ಸ್ವಾಮಿಗಳು ಗ್ರಾಮದ ಮತ್ತು ಶ್ರೀತೋಂಟದಾರ್ಯ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಶಿರೋಳ ಜಾತ್ರೆಯನ್ನು ರೊಟ್ಟಿ ಜಾತ್ರೆಯನ್ನಾಗಿಸಿ ರಾಜ್ಯಾದ್ಯಂತ ಪ್ರಸಿದ್ಧಿ ಮಾಡಿದರು. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ಧಿಯಲ್ಲಿ ಪೂಜ್ಯರ ಶ್ರಮ ಅರಿತ ಗ್ರಾಮದ ಮಹಾಜನತೆ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿನಂದನಾರ್ಹ ಎಂದರು.

ಪುಟ್ಟ ಗ್ರಾಮ ಚಿಂಚಣಿಯಲ್ಲಿ ಕನ್ನಡದ ರಥ ನಿರ್ಮಾಣ ಮಾಡಿಸಿ ರಥದ ಸುತ್ತಲು ಕನ್ನಡದ ಜ್ಞಾನಪೀಠ ಪುರಸ್ಕೃತರ ಮತ್ತು ಡಾ. ರಾಜಕುಮಾರ ಭಾವಚಿತ್ರಗಳನ್ನು ಮತ್ತು ಕನ್ನಡದ ಜಯ ಘೋಷಣೆ ಕೆತ್ತನೆ ಮಾಡಿಸಿದ್ದಾರೆ. ಪ್ರತಿ ವರ್ಷ ನ. 2ರಂದು ಗಡಿ ಭಾಗ ಚಿಂಚಣಿಯಲ್ಲಿ ಕನ್ನಡ ಜಾತ್ರೆಯಲ್ಲಿ ಕನ್ನಡ ತೇರನ್ನು ಎಳೆಸುವ ಮೂಲಕ ಯುವ ಜನತೆಯಲ್ಲಿ ಕನ್ನಡಾಭಿಮಾನ ಬಿತ್ತುವ ಕೆಲಸ ಮಾಡಿದ್ದಾರೆ. ಗಡಿ ಕನ್ನಡಿಗರ ಬಳಗ ಕಟ್ಟಿದ್ದಾರೆ. ಕನ್ನಡ ಜಾಗೃತಿ ಪುಸ್ತಕ ಮಾಲೆ ಪ್ರಕಾಶನದ ಮೂಲಕ 50 ಮೌಲಿಕ ಕೃತಿ ಪ್ರಕಟಗೊಳಿಸಿದ್ದಾರೆ ಎಂದು ಹೇಳಿದರು.

ಶ್ರೀಗಳು ಲಿಂಗೈಕ್ಯರಾದ ನಂತರ ಶಿರೋಳ ಮಠಕ್ಕೆ ಗುರುಬಸವ ಸ್ವಾಮಿಗಳಷ್ಟೆ ಸಮರ್ಥರಾದ ಶಾಂತಲಿಂಗ ಶ್ರೀಗಳು ಶಿರೋಳ ಶ್ರೀಮಠದ ಜವಾಬ್ದಾರಿ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದು ನಿಮ್ಮೆಲ್ಲರ ಪುಣ್ಯ. ಭಕ್ತಾದಿಗಳು ಸಹಕಾರ ನೀಡಬೇಕು. ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಬೇಕು. ಮಠದ ಗೋಪುರ ಕೆಲಸ ಶೀಘ್ರವಾಗಿ ಮುಕ್ತಾಯಗೊಳಿಸಲು ಭಕ್ತರಿಗೆ ಕರೆ ನೀಡಿದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಶ್ರೀಗಳು ಆಕರ್ಷಕ ಚಿತ್ತಾರ ರಚಿಸುವ ಮೂಲಕ ನೋಡುಗರ ಚಿತ್ತ ಒಂದು ಕ್ಷಣ ವಿಚಲಿತಗೊಳಿಸುವ ಅಲ್ಲಮನ ಚಿತ್ತದ ಚಿತ್ತಾರ ಎಂಬ ಎರಡು ಸಂಚಿಕೆ ಪ್ರಕಟಿಸಿದ್ದಾರೆ. ಈ ಗ್ರಾಮಕ್ಕೆ ಚಿಕ್ಕವಯಸ್ಸಿನಲ್ಲೆ ಆಗಮಿಸಿದ ಶ್ರೀಗಳು ಗ್ರಾಮದೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು. ಶ್ರೀಮಠದ ಇತಿಹಾಸ ಗದ್ದುಗೆಯ ಜಾಗೃತ ಘಟನೆಗಳನ್ನು ಮತ್ತು ಶಿರೋಳದ ಐತಿಹಾಸಿಕ ಸ್ಮಾರಕ, ಪುಣ್ಯಪುರುಷರ ಮತ್ತು ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳೊಂದಿನ ತಮ್ಮ ಗುರು-ಶಿಷ್ಯರ ಬಾಂಧವ್ಯ ಮತ್ತು ಶಿರೋಳದ ಧಾರ್ಮಿಕ ಕೇಂದ್ರಗಳ ಇತಿಹಾಸವನ್ನು ನಮ್ಮೂರ ನಮ್ಮ ಮಠ ಎಂಬ ಕೃತಿ ರಚಿಸುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆ. ಈ ಕೃತಿಯಲ್ಲಿ ನಂದೇ ನಾ ಬರಕೊಂಡೆ ಎಂಬ ವಿಷಯದಲ್ಲಿ ಗಜೇಂದ್ರಗಡದ ಹಿರೇಮಠದ ತಮ್ಮ ಮೂಲಾಶ್ರಮದ ಬಡತನದ ಬದುಕನ್ನು ಬರೆದಿದ್ದಾರೆ ಎಂದರು.

ಮಾತೆ ಅಕ್ಕಮಹಾದೇವಿ ಶರಣಮ್ಮ, ಬಾಪುಗೌಡ ತಿಮ್ಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದ್ಗುರು ಶ್ರೀಯಚ್ಚರಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರೇಶ್ವರ ಶ್ರೀಗಳು, ಹಿರೇಮಠದ ವೀರಯ್ಯನವರು, ಸಂಸದ ಪಿ.ಸಿ. ಗದ್ದಿಗೌಡ್ರ, ಬಿಜೆಪಿ ಯುವ ಧುರೀಣ ಉಮೇಶಗೌಡ ಪಾಟೀಲ, ಕಾಂಗ್ರೆಸ್‌ ಯುವ ಧುರೀಣ ಪ್ರವೀಣ ಯಾವಗಲ್‌, ಚಿಂಚಣಿ ಗಡಿ ಕನ್ನಡ ಬಳಗದ ಅಧ್ಯಕ್ಷ ಭರತ ಕುಂಬಾರ, ಸಮಾಜ ಸೇವಕ ಲಾಲಸಾಬ್‌ ಅರಗಂಜಿ, ಶರಣಪ್ಪ ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ, ಶೇಖರಯ್ಯ ನಾಗಲೋಟಿಮಠ, ವಿ.ಕೆ. ಮರೆಗುದ್ದಿ, ಚಂದ್ರಕಾಂತ ವಸ್ತ್ರದ, ಮಹಾಬಳೇಶ್ವರಪ್ಪ ಕೋಡಬಳಿ, ಲೋಕಪ್ಪ ಕರಕೀಕಟ್ಟಿ, ಮಹಾಲಿಂಗಯ್ಯ ದೊಡಮನಿ, ದೇವೇಂದ್ರಪ್ಪ ಶಾಂತಗೇರಿ, ದ್ಯಾಮಣ್ಣ ಕಾಡಪ್ಪನವರ, ಶರಣಪ್ಪಗೌಡ ತಿರಕನಗೌಡ್ರ, ಮಲ್ಲಯ್ಯ ಶಾನವಾಡಮಠ, ಗುರುಬಸವ ಶೆಲ್ಲಿಕೇರಿ, ಹುಸೆನಸಾಬ ನದಾಫ್, ರಂಜಾನಸಾಬ್‌ ನದಾಫ್‌, ದ್ಯಾಮಣ್ಣ ಶಾಂತಗೇರಿ, ಈರಯ್ಯ ಮಠದ, ಗೂಡುಸಾಬ್‌ ಯಲಿಗಾರ, ಬಸವರಾಜ ಗಡ್ಡಿ, ಗುರುದೇವಿ ಶಾನವಾಡಮಠ, ಸುವರ್ಣ ಕೋಡಬಳಿ, ತೋಂಟದಾರ್ಯ ವಿದ್ಯಾಪೀಠದ ಶಿರೋಳ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಇದ್ದರು.

ಉಮೇಶ ಮರೆಗುದ್ದಿ ಸ್ವಾಗತಿಸಿದರು, ಸುನೀಲ್ ಕಳಸದ ನಿರೂಪಿಸಿದರು, ಚಂದ್ರಕಾಂತ ಕಾಡದೇವರಮಠ ವಂದಿಸಿದರು.