ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಪ್ರದೇಶ ಇದೀಗ ಪ್ರವಾಸಿಗರ ಸೆಲ್ಫಿ ಕ್ಲಿಕ್ಕಿಸುವ ದುಸ್ಸಾಹಸದ ಸ್ಥಳವಾಗಿ ಬದಲಾಗಿದೆ.ರಾಜಾಸೀಟ್ ಬೆಟ್ಟದ ಕೆಳಗಿರುವ ಈ ತಡೆಗೋಡೆ ಅಸುರಕ್ಷಿತ ಪ್ರದೇಶ. ಸಾವಿರ ಅಡಿಗೂ ಹೆಚ್ಚು ಪ್ರಪಾತವನ್ನೂ ಹೊಂದಿದ್ದು, ಇದರ ಅರಿವೇ ಇಲ್ಲದ ಪ್ರವಾಸಿಗರು ಇಲ್ಲಿ ನಿಂತು ತಮ್ಮ ಮೊಬೈಲ್ ಕ್ಯಾಮರಾಗಳ ಮೂಲಕ ಪರಿಸರದ ಸೊಬಗನ್ನು ಸೆರೆ ಹಿಡಿಯುವ ಜೊತೆಯಲ್ಲೇ ಅಪಾಯವನ್ನೂ ಮೈ ಮೇಲೆ ಎಳೆದು ಕೊಳ್ಳುತ್ತಿದ್ದಾರೆ. ಕೆಲವರು ತಡೆಗೋಡೆ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿದರೆ, ಮತ್ತೆ ಕೆಲವರು, ರೀಲ್ಸ್ ಮಾಡೋ ನೆಪದಲ್ಲಿ ಬಂಡು ಧೈರ್ಯ ತೋರುತ್ತಿದ್ದಾರೆ.
ಯುವಕ ಯುವತಿಯರು ಸಹಿತ ದಂಪತಿಗಳು ಕೂಡ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಫೋಟೋಗಳಿಗೆ ಫೋಸ್ ನೀಡುವ ನೆಪದಲ್ಲಿ ಮೋಜು ಮಸ್ತಿಯ ಎಲ್ಲೆ ಮೀರುತ್ತಿದ್ದಾರೆ. ಈ ಸ್ಥಳದಿಂದ ನಿಂತು ನೋಡಿದರೆ ಕಣ್ಣು ಹಾಯಿಸಿದಷ್ಟು ದೂರದವರೆಗೆ ಹಚ್ಚ ಹಸಿರ ಪರಿಸರ, ಬತ್ತದ ಗದ್ದೆ ಬಯಲುಗಳ ಸಹಿತ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತದೆ. ಈ ದೃಶ್ಯ ನೋಡಲು ಎಷ್ಟು ಸುಂದರವಾಗಿದೆಯೋ ಅದಕ್ಕಿಂತ ದುಪ್ಪಟ್ಟು ಅಪಾಯವೂ ಇಲ್ಲಿದೆ. ಈ ಪ್ರದೇಶ ಕಣಿವೆ ಮಾದರಿಯಲ್ಲಿದ್ದು, ಮಳೆಗಾಲವಾದ ಕಾರಣ ಬಲವಾದ ಗಾಳಿಯೂ ಬೀಸುತ್ತದೆ. ಮಾತ್ರವಲ್ಲದೇ ತಡೆಗೋಡೆಯ ಮೇಲೆ ಯಾವುದೇ ರೀತಿ ಸುರಕ್ಷತಾ ಬೇಲಿಗಳಿಲ್ಲದ ಕಾರಣ ಸ್ವಲ್ಪ ಎಡವಿದರೂ ಬದುಕುಳಿಯುವ ಯಾವುದೇ ಸಾಧ್ಯತೆ ಇಲ್ಲಿಲ್ಲ. ಇಂತಹ ಕಡೆಗಳಲ್ಲಿ ಮೋಜಿನ ಹೆಸರಲ್ಲಿ ಪ್ರವಾಸಿಗರು ತಮ್ಮ ಜೀವದ ಜೊತೆಯೇ ಚೆಲ್ಲಾಟ ಆಡುತ್ತಿರುವುದು ಕಂಡು ಬರುತ್ತಿದೆ.2018 ರಲ್ಲಿ ಭಾರಿ ಭೂ ಕುಸಿದ ಸಂಭವಿಸಿದ ಪರಿಣಾಮ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯೇ ತುಂಡಾಗುವ ಅಪಾಯ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟ್ಯಾಂತರ ರುಪಾಯಿಗಳನ್ನು ವೆಚ್ಚ ಮಾಡಿ ಸದೃಢವಾದ ತಡೆಗೋಡೆ ನಿರ್ಮಿಸಿದೆ. ತಡೆಗೋಡೆ ಕಾಮಗಾರಿ ಮುಕ್ತಾಯವಾದ ಬಳಿಕ ಅತ್ತ ಕಡೆ ಯಾರೂ ತೆರಳದಂತೆ ಈ ಹಿಂದೆ ಹೆದ್ದಾರಿ ಪ್ರಾಧಿಕಾರ ಬಿದಿರಿನ ಬೇಲಿ ಹಾಕಿತ್ತು. ಕ್ರಮೇಣ ಗಾಳಿ ಮಳೆಗೆ ಈ ಬೇಲಿ ನಾಶವಾಗಿದ್ದು, ಇದೀಗ ಯಾವುದೇ ತಡೆ ಇಲ್ಲದಾಗಿದೆ. ಇನ್ನು ಇದೇ ಸ್ಥಳದಲ್ಲಿ ಮದ್ಯ ಹಾಗೂ ಬಿಯರ್ ಬಾಟಲಿಗಳು ಕೂಡ ಕಂಡು ಬಂದಿದ್ದು, ಇದು ಸಾರ್ವಜನಿಕರ ಮಿತಿ ಮೀರಿದ ವರ್ತನೆಯನ್ನು ಪುಷ್ಟೀಕರಿಸುತ್ತಿದೆ.
ಅಪಾಯಕಾರಿ ತಡೆಗೋಡೆ ಪ್ರದೇಶದ ಕಡೆ ತೆರಳಿ ಪ್ರವಾಸಿಗರು ಇಂತಹ ಸಾಹಸ ತೋರುತ್ತಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕಾಗಮಿಸಿದ ಮಡಿಕೇರಿ ನಗರ ಠಾಣೆ ಮತ್ತು ಸಂಚಾರಿ ಠಾಣಾ ಪೊಲೀಸರು ಸ್ಥಳದಲ್ಲಿದ್ದ ಪ್ರವಾಸಿಗರಿಗೆ ಬುದ್ಧಿ ಹೇಳಿ ಹಿಂದಕ್ಕೆ ಕಳುಹಿಸಿದ್ದಾರೆ.ಕೆಲವರು ಹೆದ್ದಾರಿ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಇತರ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳನ್ನು ಸ್ಥಳದಿಂದ ತೆರವು ಮಾಡಲಾಯಿತು. ಬಳಿಕ ಅಪಾಯಕಾರಿ ಪ್ರದೇಶಕ್ಕೆ ಯಾರೂ ಸುಳಿಯದಂತೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆಯ ಟೇಪ್ ಅನ್ನು ಅಳವಡಿಸಲಾಯಿತು.
ಮಡಿಕೇರಿ - ಮಂಗಳೂರು ರಸ್ತೆಯ ಬದಿಯಲ್ಲಿ ನಿರ್ಮಿಸಲಾಗಿರುವ ತಡೆ ಗೋಡೆ ಸಮೀಪವೇ ದೊಡ್ದ ಪ್ರಪಾತವಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಇದರ ತುದಿಯಲ್ಲಿ ನಿಂತು ಫೋಟೋ ತೆಗೆಯೋದು ರಿಲ್ಸ್ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತ ಹಿನ್ನೆಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಸ್ಥಳದಲ್ಲಿದ್ದವರಿಗೆ ತಿಳಿ ಹೇಳಿ ಕಳುಹಿಸಲಾಗಿದ್ದು, ಇಲ್ಲಿಗೆ ಎಚ್ಚರಿಕೆಯ ಟೇಪ್ ಅಳವಡಿಸಲಾಗಿದೆ. ಈ ಪ್ರದೇಶ ಅಸುರಕ್ಷಿತವಾಗಿದ್ದು, ಇಲ್ಲಿ ಯಾರು ಕೂಡಾ ವಾಹನ ನಿಲ್ಲಿಸಿ ಪೋಟೋ ತೆಗೆಯೋದಾಗಲಿ, ರೀಲ್ಸ್ ಮಾಡುವುದಾಗಲಿ ಮಾಡುವಂತಿಲ್ಲ. ಅಂತಹ ಪ್ರಸಂಗ ಕಂಡುಬಂದಲ್ಲಿ ಸಂಬಂದಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.