ಸಾರಾಂಶ
ರಾಮನಗರ: ಮಕ್ಕಳ ಬಿಸಿಯೂಟಕ್ಕೆ ಬಳಕೆ ಮಾಡಬೇಕಿದ್ದ ಆಹಾರ ಪದಾರ್ಥ ಮಾರಾಟ ಮಾಡಿದ ಆರೋಪದ ಮೇರೆಗೆ ರಾಮನಗರ ಮೆಹಬೂಬ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಜೀಯಾ ಬೇಗಂ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳ ಬಿಸಿ ಊಟಕ್ಕೆ ಬಳಕೆಯಾಗಬೇಕಿದ್ದ ಅಕ್ಕಿ, ಧವಸ ಧಾನ್ಯಗಳನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿ, ಸಾಗಿಸುವ ವೇಳೆ ದಾಳಿ ನಡೆಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ವಾಹನ ಸಮೇತ ಆಹಾರ ಪದಾರ್ಥಗಳನ್ನು ಸೀಜ್ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.ರಾಮನಗರದ ಮೆಹಬೂಬ್ ನಗರ (ಪೂಲ್‌ಬಾಗ್) ನಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಕ್ಷರ ದಾಸೋಹದ ಅಕ್ಕಿ, ಬೇಳೆ ಹಾಲಿನ ಪೌಡರ್ ಅನ್ನು ಮಾರಾಟ ಮಾಡಲಾಗಿದೆ. ಅಡುಗೆ ಸಿಬ್ಬಂದಿ ಮನೆಯಲ್ಲಿದ್ದ ಈ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಸಾರ್ವಜನಿಕರ ದೂರಿನ ಮೇರೆಗೆ ದಾಳಿ ನಡೆಸಿದ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳು ಆಹಾರ ಪದಾರ್ಥ ಸಾಗಿಸುತ್ತಿದ್ದ ಆಟೋವನ್ನು ರಾಮನಗರ ರೋಟರಿ ಸರ್ಕಲ್ ಬಳಿ ತಡೆದು ಪರಿಶೀಲನೆ ನಡೆಸಿ, ಸ್ಥಳದಲ್ಲೇ ಪಡಿತರ ಹಾಗೂ ಆಟೋವನ್ನು ಸೀಜ್ ಮಾಡಿದ್ದರು.ಈ ಬಗ್ಗೆ ತನಿಖೆ ಕೈಗೊಂಡ ಬಿಇಒ ವಿಚಾರಣೆಗಾಗಿ ತ್ರಿಸದಸ್ಯ ಸಮಿತಿ ರಚನೆ ಮಾಡಿತ್ತು. ತನಿಖೆ ವೇಳೆ ಆಹಾರ ಪದಾರ್ಥಗಳು ಮಾರಾಟವಾಗಿರುವುದು ಮೇಲ್ನೋಟಕ್ಕೆ ಕಂಡುಬಂದ, ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.