ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು : ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರೆಭಾಷೆ ಸಾಹಿತಿ ಕೆ.ಆರ್.ಗಂಗಾಧರ, ಡಾ। ಯು.ಪಿ.ಶಿವಾನಂದ, ದಂಬೆಕೋಡಿ ಆನಂದ ಅವರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ
ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಈಡೇರಿಸಲಾಗುತ್ತದೆ. ಈ ಹಿಂದೆ ಭಾಗಮಂಡಲದಲ್ಲಿ ನಾಡಗೌಡ ಸಮುದಾಯಕ್ಕೆ ₹1 ಕೋಟಿ ಒದಗಿಸಲಾಗಿತ್ತು. ಪ್ರಸ್ತುತ ₹50 ಲಕ್ಷ ಬೇಡಿಕೆಯನ್ನು ಈಡೇರಿಸಲಾಗುವುದು. ಇತರ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ತುಳು, ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಕರ್ನಾಟಕದಲ್ಲಿ 230 ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅರೆಭಾಷಿಕರು ನನ್ನ ಹಾಗೂ ಪೊನ್ನಣ್ಣ ಅವರ ಜೊತೆ ನಿಂತಿದ್ದಾರೆ. ನೀವು ನಮ್ಮಿಬ್ಬರನ್ನು ಬೆಂಬಲಿಸಿದ ಕಾರಣಕ್ಕೆ ನಾನು ಇಲ್ಲಿ ನಿಂತಿದ್ದೇನೆ. ಸಂಘದವರು ಚಟುವಟಿಕೆಗಳನ್ನು ನಡೆಸಲು ಲಭ್ಯತೆ ನೋಡಿಕೊಂಡು ಜಾಗ ನೀಡಲಾಗುವುದು ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಒಂದು ಭಾಷೆ ಬೆಳೆಯಲು ಇನ್ನೊಂದು ಭಾಷೆಯನ್ನು ದ್ವೇಷಿಸಿ, ದೂರ ಮಾಡಬೇಕಿಲ್ಲ. ಹಾಗೆ ಮಾಡಿದರೆ ನಮ್ಮ ಭಾಷೆ ಬೆಳೆಯಲು ಸಾಧ್ಯವಿಲ್ಲ. ನಮ್ಮ ಭಾಷೆಯನ್ನು ಚೆನ್ನಾಗಿ ಕಲಿತು, ಬೇರೆ ಭಾಷೆಯನ್ನು ಕಲಿತಾಗ ಮಾತ್ರ ನಮ್ಮ ಭಾಷೆ ಅಭಿವೃದ್ಧಿ ಸಾಧ್ಯ. ಲಿಪಿ ಇಲ್ಲದಿದ್ದರೂ ಅರೆಭಾಷೆಯನ್ನು ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ. ಅದು ನಮ್ಮ ಜಿಲ್ಲೆಯ ಶಕ್ತಿ. ಯುವ ಜನಾಂಗಕ್ಕೆ ಅರೆಭಾಷೆ ಕಲಿಯಲು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.
ಸಚಿವ ಬೈರತಿ ಸುರೇಶ್, ಶಾಸಕರಾದ ಪೊನ್ನಣ್ಣ, ಮಂಥರಗೌಡ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮತ್ತಿತರರು ಉಪಸ್ಥಿತರಿದ್ದರು.-ಬಾಕ್ಸ್-
ನಾಯಕನಾದವನಿಗೆ ಲಕ್ಷಾಂತರ ಹಿಂಬಾಲಕರು ಬೇಡ: ಡಿಕೆಶಿ
ಅರೆಭಾಷೆಯವರ ಜನಸಂಖ್ಯೆ ನಾಲ್ಕು ಲಕ್ಷ ಮಾತ್ರವಿದೆ ಎಂದು ಹಿಂಜರಿಕೆ ಬೇಡ. ಒಂದು ಪ್ರಬುದ್ಧ ನಾಯಕತ್ವ ಅಥವಾ ತೀರ್ಮಾನ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ನಾಯಕನಾದವನಿಗೆ ಲಕ್ಷಾಂತರ ಜನ ಹಿಂಬಾಲಕರು ಬೇಡ. ಧೈರ್ಯ ಹಾಗೂ ತೀರ್ಮಾನ ಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಡಿಮೆ ಜನಸಂಖ್ಯೆಯ ಅನೇಕರು ದೊಡ್ಡ ಸ್ಥಾನಕ್ಕೆ ಹೋಗಿಲ್ಲವೇ? ಕೇವಲ ನಾಯಕತ್ವ ಎಂದರೆ ರಾಜಕೀಯ ಮಾತ್ರವಲ್ಲ. ಔದ್ಯೋಗಿಕ, ಶಿಕ್ಷಣ, ಸಾಹಿತ್ಯ, ಸಂಗೀತ ಹೀಗೆ ಅನೇಕ ಕ್ಷೇತ್ರದಲ್ಲಿ ಅರೆಭಾಷಿಕರು ಸಾಧನೆ ಮಾಡಿದ್ದಾರೆ ಎಂದರು.