ಸಾರಾಂಶ
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ತಂದೆ ನಿವೃತ್ತ ಪ್ರಾಂಶುಪಾಲ ಎಂ. ಕೆ. ವಾಸುದೇವ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಕನ್ನಡಪ್ರಭ ವಾರ್ತೆ ಕಾರ್ಕಳಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ತಂದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಹಾಗೂ ನಿವೃತ್ತ ಪ್ರಾಂಶುಪಾಲ ಎಂ.ಕೆ. ವಾಸುದೇವ (87) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.ಶಿಕ್ಷಕರಾಗಿದ್ದ ವಾಸುದೇವ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಆರ್‌ಎಸ್‌ಎಸ್ ಪ್ರಮುಖರಾಗಿದ್ದರು. ವಿದ್ಯಾರ್ಥಿ ಜೀವನದಿಂದಲೇ ಸಂಘದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.ಗುರುವಾರ ಮಧ್ಯಾಹ್ನ 1 ಗಂಟೆಗೆ ಪಾರ್ಥಿವ ಶರೀರವನ್ನು ಮಣಿಪಾಲದಿಂದ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಬಳಿಕ ನಿಟ್ಟೆ ಗ್ರಾಮಕ್ಕೆ ಕರೆದೊಯ್ಯಲಾಯಿತು. ಅವರ ನಿವಾಸ ಕಲಂಬಾಡಿ ಪದವಿನಲ್ಲಿ ಸಂಜೆ 4 ಗಂಟೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು.
ಅವರು ಪತ್ನಿ, ಮಗ ವಿ. ಸುನಿಲ್ ಕುಮಾರ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗಷ್ಟೇ ಸುನಿಲ್ ಕುಮಾರ್ ಅವರ ಸಹೋದರ ನಿಧನರಾಗಿದ್ದರು. ಅಂತಿಮ ನಮನ ಸಲ್ಲಿಸಿದ ಗಣ್ಯರು:ವಾಸುದೇವರ ಅಂತಿಮ ದರ್ಶನಕ್ಕೆ ರಾಜ್ಯದ ಹಾಗೂ ಕೇಂದ್ರದ ಗಣ್ಯರು, ರಾಜಕೀಯ ಮುಖಂಡರು, ಸಂಘದ ಹಿರಿಯರು ಸೇರಿದಂತೆ ಅನೇಕರು ಆಗಮಿಸಿದ್ದರು.ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾದ ದಾ. ಮಾ. ರವಿ, ಸಹ ಪ್ರಾಂತ ಪ್ರಚಾರಕ ನಂದೀಶ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಮಾಜಿ ಸಚಿವರಾದ ಸಿ.ಟಿ. ರವಿ, ಪ್ರಮೋದ್ ಮಧ್ವರಾಜ್, ಹರತಾಳು ಹಾಲಪ್ಪ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕಿರಣ್ ಕುಮಾರ್ ಕೊಡ್ಲಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ರಘುಪತಿ ಭಟ್, ಡಾ. ಎಂ.ಮೋಹನ ಆಳ್ವ (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ), ಡಾ. ಸುಧಾಕರ ಶೆಟ್ಟಿ (ಜ್ಞಾನಸುಧಾ), ಬಿಜೆಪಿ ವಿಭಾಗ ಪ್ರಭಾರಿ ಉದಯ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹಿರಿಯ ನ್ಯಾಯವಾದಿ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ್, ಆರ್‌ಎಸ್‌ಎಸ್‌ನ ಪಿ.ಎಸ್. ಪ್ರಕಾಶ್ ಮೊದಲಾದವರು ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.