ಹಿರಿಯ ಸಾಹಿತಿ, ಭಾಷಾತಜ್ಞ ಕೆ.ಟಿ. ಗಟ್ಟಿ ನಿಧನ

| Published : Feb 20 2024, 01:50 AM IST / Updated: Feb 20 2024, 01:23 PM IST

K T Gatti

ಸಾರಾಂಶ

ಸಾಹಿತಿ, ಭಾಷಾತಜ್ಞ, ಪ್ರಾಧ್ಯಾಪಕರೂ ಆಗಿ ಜನಪ್ರಿಯತೆ ಪಡೆದಿದ್ದ ಕೆ.ಟಿ. ಗಟ್ಟಿ (85) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರನಲ್ಲಿ ನಿಧನರಾದರು. ಕೆ.ಟಿ. ಗಟ್ಟಿ ಅವರ ದೇಹವನ್ನು ಅವರ ಇಚ್ಛೆಯಂತೆ ಕೆಎಂಸಿ ಆಸ್ಪತ್ರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ದಾನ ಮಾಡುವ ಪ್ರಕ್ರಿಯೆ ನಡೆಯಿತು

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯ ಕಾದಂಬರಿಕಾರ, ಸಾಹಿತಿ, ಭಾಷಾತಜ್ಞ, ಪ್ರಾಧ್ಯಾಪಕರೂ ಆಗಿ ಜನಪ್ರಿಯತೆ ಪಡೆದಿದ್ದ ಕೆ.ಟಿ. ಗಟ್ಟಿ (85) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ.

1938ರ ಜುಲೈ 22ರಂದು ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಜನಿಸಿದ ಕೆ.ಟಿ.ಗಟ್ಟಿ, 1957ರಿಂದಲೇ ಸಾಹಿತ್ಯ ಕೃಷಿ ಆರಂಭಿಸಿದ್ದರು. ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು 8ನೇ ತರಗತಿಯವರೆಗೆ ಮಾತ್ರ.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಭಾಗಿಯಾದರು. ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು. ಮಾಯಿಪ್ಪಾಡಿಯ ಸರ್ಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕ ತರಬೇತಿ ಪಡೆದರು. 

ತಲಚೇರಿಯ ಸರ್ಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್‌. ಪದವಿ ಪಡೆದ ಗಟ್ಟಿ ಅವರು ಕಾಸರಗೋಡಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು.

ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದರು. 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 

ಬಳಿಕ ಭಾರತ ಸರ್ಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮಾ ಮತ್ತು ಆಕ್ಸ್‌ಫರ್ಡ್‌ನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಡಿಪ್ಲೊಮಾ ಪಡೆದರು.

ವನಸಿರಿಯಲ್ಲಿ ಅರಳಿದ ಲೇಖಕ: ಕೆಲಕಾಲ ಇಥಿಯೋಪಿಯಾದಲ್ಲಿದ್ದು 1982ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ಆ ‘ವನಸಿರಿ’ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿದ್ದರು. 

ಹಲವಾರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದಿದ್ದರ ಅನುಭವದಿಂದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್‌ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ತಂದೆ ತಾಯಿಗಳಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನು ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ. 

ಕನ್ನಡದಲ್ಲಿ ಉತ್ಕೃಷ್ಟತೆಗಾಗಿ ತಾಯಿ-ತಂದೆ, ಗುರುಗಳಾಗಿ ತಾಯಿ-ತಂದೆ, ಇಂಗ್ಲಿಷ್‌ ಮತ್ತು ಕನ್ನಡ ಭಾಷಾಧ್ಯಯನ, ನಿಮ್ಮ ಮಗುವಿಗೆ ಇಂಗ್ಲಿಷ್‌ ಹಾಗೂ ಕನ್ನಡ ಕಲಿಸುವ ವಿಧಾನ, ಕನ್ನಡ ಆಲಿಸಿ ಕಲಿಸಿ, ಇಂಗ್ಲಿಷ್‌ ಆಲಿಸಿ ಕಲಿಸಿ ಮುಂತಾದ ಪುಸ್ತಕಗಳಲ್ಲದೆ, ಇಂಗ್ಲಿಷ್‌ನಲ್ಲಿ ಇಂಗ್ಲಿಷ್‌ ಕನ್ನಡ ಬೈಲಿಂಗ್ಟಲ್‌, ಪೇರೆಂಟಿಂಗ್‌ ಫಾರ್ ಎಕ್ಸೆಲೆನ್ಸಿ, ಬೈಲಿಂಗ್ವಲ್‌ ಮಾಸ್ಟರ್, ಹೌಟು ಟೀಚ್‌ ಯುವರ್ ಚೈಲ್ಡ್‌ ಇಂಗ್ಲಿಷ್‌ ಅಂಡ್‌ ಕನ್ನಡ, ಲರ್ನ್ ಕನ್ನಡ ಥ್ರೂ ಇಂಗ್ಲಿಷ್‌, ಲರ್ನ್ ಇಂಗ್ಲಿಷ್‌ ಥ್ರೂ ಕನ್ನಡ ಇವೇ ಮೊದಲಾದ ಕೃತಿಗಳನ್ನು ರಚಿಸಿದ್ದು, ಇವು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉಪಕಾರಿ ಎನಿಸಿವೆ. 

ಈ ಕೃತಿಗಳಲ್ಲದೆ ಅಂಡಮಾನ್‌ ಪ್ರವಾಸದ ‘ನಿಸರ್ಗ ಕನ್ಯೆ ಅಂಡಮಾನ್‌’, ಪ್ರಬಂಧ ಸಂಕಲನ ‘ಗುಳಿಗೆಗಳು’ ಮತ್ತು ಗಟ್ಟಿಯವರ ಆತ್ಮಕಥೆ ‘ತೀರ’ ಪ್ರಕಟವಾಗಿವೆ.

50ಕ್ಕೂ ಅಧಿಕ ಕಾದಂಬರಿ: ಕೆ.ಟಿ. ಗಟ್ಟಿಯವರ ಮೊದಲ ಕಾದಂಬರಿ ‘ಶಬ್ದಗಳುʼ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ 1976ರಲ್ಲಿ ಪ್ರಕಟವಾಗಿತ್ತು. ಜನಪ್ರಿಯ ಕಾದಂಬರಿ ಎನಿಸಿ ಅಂದಿನ ದಿನಗಳಲ್ಲೇ ಸತತವಾಗಿ ನಾಲ್ಕು ಮುದ್ರಣಗಳನ್ನು ಕಂಡ ಖ್ಯಾತಿಗೂ ಪಾತ್ರವಾಗಿತ್ತು. 

1978ರಲ್ಲಿ ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರವರೆಗೆ ಅವರ 14 ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಂಡಿವೆ. ‘ಮನೆ’, ಕಾಮಯಜ್ಞ, ‘ಪೂಜಾರಿ’, ‘ಅವಿಭಕ್ತರು’, ‘ನಿರಂತರ’, ‘ನವಂಬರ್ 10’, ‘ಸನ್ನಿವೇಶ’, ‘ಕಾರ್ಮುಗಿಲು’, ‘ರಸಾತಳ’ ಹೀಗೆ ವಿವಿಧ ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟವಾಗಿವೆ. 

ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಅವರ ಇನ್ನಿತರ ಕಾದಂಬರಿಗಳು. ಹೀಗೆ ಅವರ ಕಾದಂಬರಿಗಳ ಸಂಖ್ಯೆಯೇ 50 ಮೀರಿವೆ.

ಗಟ್ಟಿ ಅವರು ಆಗಾಗ ಪತ್ರಿಕೆಗಳಿಗೆ ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’, ‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಕಥಾಸಂಕಲನಗಳಾಗಿ ಪ್ರಕಟವಾಗಿವೆ.

ಕೆಟಿ ಗಟ್ಟಿ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ನಾಡಿನ ಸಾಹಿತಿಗಳು, ಲೇಖಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

ಕೆಎಂಸಿ ಆಸ್ಪತ್ರೆಗೆ ದೇಹದಾನ: ಕೆ.ಟಿ. ಗಟ್ಟಿ ಅವರ ದೇಹವನ್ನು ಅವರ ಇಚ್ಛೆಯಂತೆ ಕೆಎಂಸಿ ಆಸ್ಪತ್ರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ದಾನ ಮಾಡುವ ಪ್ರಕ್ರಿಯೆ ನಡೆಯಿತು. ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. 

ಬಳಿಕ ದೇಹದಾನ ಮಾಡಲಾಯಿತು. ಗಟ್ಟಿ ಅವರ ಒಬ್ಬ ಪುತ್ರ ನಿಟ್ಟೆ ವಿವಿಯಲ್ಲಿ ಪ್ರೊಫೆಸರ್ ಆಗಿದ್ದರೆ, ಒಬ್ಬಳು ಮಗಳು ಆಸ್ಟ್ರಿಯಾದಲ್ಲಿ ಆಂಥ್ರಾಪಾಲಜಿಸ್ಟ್‌, ಇನ್ನೊಬ್ಬ ಪುತ್ರಿ ಪರಿಸರ ವಿಜ್ಞಾನಿಯಾಗಿದ್ದಾರೆ.