ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ನಿಧನ

| Published : Mar 28 2024, 12:46 AM IST

ಸಾರಾಂಶ

ಕನ್ನಡ ಸಾರಸ್ವತ ಲೋಕದ ಹಿರಿಯರು, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಗುರುಲಿಂಗ ಕಾಪಸೆ (96) ವಯೋಸಹಜ ಕಾಯಿಲೆಯಿಂದಾಗಿ ಬುಧವಾರ ಇಹಲೋಕ ತ್ಯಜಿಸಿದರು.

ಧಾರವಾಡ:

ಕನ್ನಡ ಸಾರಸ್ವತ ಲೋಕದ ಹಿರಿಯರು, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಗುರುಲಿಂಗ ಕಾಪಸೆ (96) ವಯೋಸಹಜ ಕಾಯಿಲೆಯಿಂದಾಗಿ ಬುಧವಾರ ಇಹಲೋಕ ತ್ಯಜಿಸಿದರು.

ಡಾ. ಕಾಪಸೆ ಮೂಲತಃ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನವರು. 1928 ಏ. 2ರಂದು ಜನಿಸಿದ ಅವರು, ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಧಾರವಾಡಕ್ಕೆ ಬಂದು ಇಲ್ಲಿಯ ಸಪ್ತಾಪೂರ ದುರ್ಗಾ ಕಾಲನಿಯಲ್ಲಿ ನೆಲೆಸಿದ್ದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಂಪೂರ್ಣ 96 ವಸಂತಗಳ ತುಂಬು ಜೀವನ ನಡೆಸಿದ ಕಾಪಸೆ ಅವರ ನಡೆ, ನುಡಿ, ಸರಳ ಆದರ್ಶಗಳಿಂದ ಇತರರಿಗೆ ಮಾದರಿಯಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 2ರ ವರೆಗೆ ದುರ್ಗಾ ಕಾಲನಿಯ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಬೈಲಹೊಂಗಲ ಡಾ. ಮಹಾಂತೇಶ ರಾಮಣ್ಣವರ ಆಸ್ಪತ್ರೆಗೆ ದಾನ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕಾಪಸೆ, ಹಲಸಂಗಿ ಗೆಳೆಯರು, ''''''''ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಶಾಲ್ಮಲೆಯಿಂದ ಗೋದಾವರೆಗೆ (ಪ್ರವಾಸ ಕಥನ), ಬೇಂದ್ರೆ ಮಧುರ ಚೆನ್ನ ಸಖ್ಯಯೋಗ ಕೃತಿಗಳು ಮಾತ್ರವಲ್ಲದೇ ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ಪ್ರವಚನ, ಹರಿಹರನ ಐದು ರಗಳೆಗಳು, ಅರವಿಂದ ಪರಿಮಳ, ಹೈಮವತಿ ಶೈಶವಲೀಲೆ, ಬೆಳಗಳಿ, ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ, ಭವ್ಯ ಮಾನವ ಕಾವ್ಯ ದರ್ಶನ, ಜ್ಞಾನಸಿಂಧು ಅಂತಹ ಹಲವು ಕೃತಿಗಳನ್ನು ಡಾ. ಗುರುಲಿಂಗ ಕಾಸಪೆ ಸಂಪಾದಿಸಿದ್ದಾರೆ.

ಕಾಪಸೆ ಅವರಿಗೆ ಒಂದು ಪುಟದ ಕಥೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ, ಮೊದಲಾದ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಸಂತಾಪ:

ಗುರುಲಿಂಗ ಕಾಪಸೆ, ಮಧುರಚೆನ್ನರು ಮತ್ತು ಬೇಂದ್ರೆ ಅವರ ಎಂಟು ದಶಕಗಳಿಂದ ಹತ್ತಿರದಿಂದ ನೋಡಿ, ಅವರಿಬ್ಬನ್ನು ಆದರ್ಶವನ್ನಾಗಿ ಮಾಡಿಕೊಂಡಿದ್ದರು. ಅವರ ಅಗಲಿಕೆ ಕನ್ನಡ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅವರ ಪಾರ್ಥೀವ ಶರೀರಕ್ಕೆ ನಮಿಸಿ ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಸಂತಾಪ ಸೂಚಿಸಿದರು. ಕಾಪಸೆ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಹ.ವೆಂ. ಕಾಖಂಡಕಿ ಸಂತಾಪ ವ್ಯಕ್ತಪಡಿಸಿದರು.

ಸಾವಿನಲ್ಲೂ ಸಾರ್ಥಕತೆ..

ಗುರುಲಿಂಗ ಕಾಪಸೆ ಅವರು ಹಿರಿಯರು. ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮರಣಾನಂತರ ದೇಹದಾನ ಮಾಡಿದ್ದಾರೆ. ಅವರು ಕನ್ನಡಕ್ಕೆ ಮಾಡಿದ ಸೇವೆ ಅಪಾರ. ಅವರನ್ನು ಧಾರವಾಡದ ಜನ ಸದಾಕಾಲ ನೆನಪಿಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.