- ಶ್ರೀ ಸಾಯಿಬಾಬಾ ದೇಗುಲದಲ್ಲಿ ದರ್ಶನ ಮುಗಿಸಿ ಹೋಗುವಾಗ ಹಾರ್ಟ್ ಅಟ್ಯಾಕ್

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ ಪದಾಧಿಕಾರಿ, ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಮುಖಂಡರಾದ ರಾಧೇಶ್ ಎಸ್. ಜಂಬಗಿ ನಗರದಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ, ಪತ್ನಿ ಜ್ಯೋತಿ ಜಂಬಗಿ, ಪುತ್ರಿ ಶ್ರೇಯಾ ಜಂಬಗಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಗರದ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.


ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದ ಜಂಬಗಿ ರಾಧೇಶ್‌ ಎಂದಿನಂತೆ ಗುರುವಾರ ಬೆಳಗ್ಗೆ ಸ್ನೇಹಿತರೊಂದಿಗೆ ಬೆಳಗಿನ ವಾಯುವಿಹಾರ, ಟೀ-ಕಾಫಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಗುರುವಾರದ ದಿನವಾಗಿದ್ದರಿಂದ ಎಂಸಿಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು, ಮನೆಗೆ ವಾಪಸಾಗುವಾಗ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ.

ಮೃತರ ನಿವಾಸಕ್ಕೆ ಶಾಸಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಇ. ರಂಗಸ್ವಾಮಿ, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್‌, ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯರಾದ ಸುರಭಿ ಎಸ್.ಶಿವಮೂರ್ತಿ, ಕೆ.ಚಮನ್ ಸಾಬ್‌, ಲಯನ್ಸ್ ಕ್ಲಬ್‌ನ ಮಹಾಂತೇಶ ವಿ.ಒಣರೊಟ್ಟಿ, ವಾಸುದೇವ ಎಲ್.ರಾಯ್ಕರ್, ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಸಿವಿಲ್ ಎಂಜಿನಿಯರ್ ಮಂಜುನಾಥ ಸ್ವಾಮಿ, ಔಷಧಿ ಮಾರಾಟಗಾರರ ಸಂಘದ ಎನ್.ರವಿಕುಮಾರು ನುಗ್ಗೇಹಳ್ಳಿ, ಎನ್.ಸಿ. ಮಂಜುನಾಥ ಸೇರಿದಂತೆ ಅನೇಕ ಗಣ್ಯರು, ಹಿರಿಯರು, ಸಮಾಜದ ಮುಖಂಡರು ಅಂತಿಮ ದರ್ಶನ ಪಡೆದರು.

- - -

-23ಕೆಡಿವಿಜಿ4, 5, 6: ಜಂಬಗಿ ರಾಧೇಶ