ಕಬಿನಿ ಹಿನ್ನೀರಿನ ಮಳಲಿ ಜಮೀನಿನಲ್ಲಿ ಗಂಡು ಹುಲಿ ಸೆರೆ

| Published : May 07 2024, 01:04 AM IST

ಸಾರಾಂಶ

ಈ ಹುಲಿಯು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳಿಂದ ಬಳ್ಳೆ ಹಾಡಿ ಉಡಕನಮಾಳ ಸುತ್ತಮುತ್ತ ಜನತೆ ಸಾಕಿದ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಂಡಿರುವುದಾಗಿ ತಿಳಿದು ಬಂದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಾಲೂಕಿನ ಅಂತರಸಂತೆ ಹೋಬಳಿ ಕಬಿನಿ ಹಿನ್ನೀರಿನ ಮಳಲಿ ಜಮೀನಿನಲ್ಲಿ ಸುಮಾರು ಏಳರಿಂದ ಎಂಟು ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಬನ್ನೇರುಘಟ್ಟ ಮೃಗಾಲಯಕ್ಕೆ ರವಾನಿಸಿದ್ದಾರೆ.

ಈ ಹುಲಿಯು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳಿಂದ ಬಳ್ಳೆ ಹಾಡಿ ಉಡಕನಮಾಳ ಸುತ್ತಮುತ್ತ ಜನತೆ ಸಾಕಿದ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಂಡಿರುವುದಾಗಿ ತಿಳಿದು ಬಂದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರು.

ಹುಲಿಯ ಮಗ್ಗೆ ಗ್ರಾಮದ ಬಳಿ ಜಾನುವಾರುಗಳನ್ನು ಕೊಂದು ತಿಂದಿರುವುದು ತಿಳಿದು ಬಂದಿತು. ಶನಿವಾರ ಈ ಸಂಬಂಧ ಅರಣ್ಯ ಇಲಾಖೆಯವರು ರೆಸಾರ್ಟ್ ಬಳಿ ಹುಲಿ ಪ್ರತ್ಯಕ್ಷವಾಗಿದ್ದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಬಿದ್ದಿದೆ. ಆದರೂ ಸಹ ಹುಲಿಯು ಯಾವುದೇ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ.

ಈ ಸಂಬಂಧ ಅರಣ್ಯ ಇಲಾಖೆಯವರು ಮನುಷ್ಯರ ಮೇಲೆ ದಾಳಿ ಮಾಡಬಹುದೆಂಬ ಶಂಕೆಯ ಮೇರೆಗೆ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಹುಲಿಯ ಮೈ ಮೇಲೆ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ವೈದ್ಯರ ಚಿಕಿತ್ಸೆ ನಂತರ ಬನ್ನೇರುಘಟ್ಟ ಮೃಗಾಲಯಕ್ಕೆ ಹಸ್ತಾಂತರವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.