ಕುಡಿಯುವ ನೀರಿಗೆ ಪ್ರತ್ಯೇಕ ಬಜೆಟ್‌: ಅಧಿಕಾರಿಗಳ ತರಾಟೆ

| Published : Mar 08 2024, 01:53 AM IST

ಕುಡಿಯುವ ನೀರಿಗೆ ಪ್ರತ್ಯೇಕ ಬಜೆಟ್‌: ಅಧಿಕಾರಿಗಳ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆಯ ಕುಡಿಯುವ ನೀರಿನ ಆಯ- ವ್ಯಯ ಮಂಡಿಸಿದ ಬಳಿಕ ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಪ್ರತಿಪಕ್ಷದಂತೆ ನಿರಂತರ ಯೋಜನೆಯಲ್ಲಿನ ಲೋಪಗಳನ್ನು ಬಹಿರಂಗ ಪಡಿಸಿದರು. ಇನ್ನು ಪ್ರತಿಪಕ್ಷದ ಸದಸ್ಯರು ಮಾತ್ರ ಮೂಕಪ್ರೇಕ್ಷಕರಂತೆ ಸುಮ್ಮನೆ ಕುಳಿತು ಕೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನೀರಸಾಗರದಿಂದ ನೀರು ಸರಬರಾಜು ಆಗುವ ವಾರ್ಡ್‌ಗಳ ಬಗ್ಗೆ ಬಜೆಟ್‌ನಲ್ಲಿ ಸೇರಿಸಿಲ್ಲ. ಹೊಸ ಮೀಟರ್‌ ಅಳವಡಿಕೆ ಬಗ್ಗೆಯೂ ಪ್ರಸ್ತಾಪವಿಲ್ಲ...!

ಇವು ಇಲ್ಲಿನ ಮಹಾನಗರ ಪಾಲಿಕೆ ಗುರುವಾರ ಮಂಡಿಸಿದ ಕುಡಿಯುವ ನೀರಿನ ಬಜೆಟ್‌ ಮೇಲೆ ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಬಜೆಟ್‌ನ ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಮಹಾನಗರದಲ್ಲಿ ನಿರಂತರ ನೀರು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಎಲ್‌ಆ್ಯಂಡ್‌ ಟಿ ಕಂಪನಿಗೆ ಈ ಯೋಜನೆಯ ಗುತ್ತಿಗೆ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್‌ ಅನ್ನೇ ಪಾಲಿಕೆ ಮಂಡಿಸಿದೆ. ಆಯ- ವ್ಯಯ ಮಂಡಿಸಿದ ಬಳಿಕ ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಪ್ರತಿಪಕ್ಷದಂತೆ ನಿರಂತರ ಯೋಜನೆಯಲ್ಲಿನ ಲೋಪಗಳನ್ನು ಬಹಿರಂಗ ಪಡಿಸಿದರು. ಇನ್ನು ಪ್ರತಿಪಕ್ಷದ ಸದಸ್ಯರು ಮಾತ್ರ ಮೂಕಪ್ರೇಕ್ಷಕರಂತೆ ಸುಮ್ಮನೆ ಕುಳಿತು ಕೇಳಿದರು.

ವಾಗ್ವಾದ:

ಕೊನೆಗೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ಆಡಳಿತ ಪಕ್ಷದ ಸದಸ್ಯರೇ ಬಜೆಟ್‌ನ್ನು ವಿರೋಧಿಸುತ್ತಿದ್ದಾರೆ ಎಂದರೆ ಇದು ಹೇಗಿರಬೇಡ ಎಂದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ವೀರಣ್ಣ ಸವಡಿ ಹಾಗೂ ಈರೇಶ ಅಂಚಟಗೇರಿ, ನೀವು ನಿಮ್ಮ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ತಪ್ಪುಗಳನ್ನು ಎತ್ತಿ ತೋರಿಸಬೇಕು. ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ನೀವು ವಿಫಲರಾಗಿದ್ದೀರಿ ಎಂದರು. ಅಲ್ಲದೇ, ಬಜೆಟ್‌ ಚರ್ಚೆಯಲ್ಲಿ ಆಡಳಿತ ಪಕ್ಷ ತಪ್ಪುಗಳನ್ನು ವಿರೋಧಿಸಬಾರದೆಂಬ ರೂಲ್ಸ್‌ ಏನಾದರೂ ಇದೆಯಾ? ಇದ್ದರೆ ತೋರಿಸಿ ಎಂದು ಪ್ರತಿಪಕ್ಷಕ್ಕೆ ತಿರುಗೇಟು ನೀಡಿದರು.

ಆಗ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದ ನಡೆಯಿತು. ಒಬ್ಬರಿಗೊಬ್ಬರು ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದರು.

ಆಗ ಪ್ರತಿಪಕ್ಷದ ಸದಸ್ಯರು, ನಾವು ಮಾತನಾಡಿದ್ದೇವೆ. ನಾವು ಚರ್ಚೆ ಮಾಡಿದ್ದೇವೆ ಎಂದು ಸಮಜಾಯಿಷಿ ಕೊಡಲು ಮುಂದಾದರು. ಆದರೆ ನೀವು ಸರಿಯಾಗಿ ಅಧ್ಯಯನ ಮಾಡದೇ ಬರೀ ಎರಡೇ ನಿಮಿಷಕ್ಕೆ ನಿಮ್ಮ ಮಾತನ್ನು ಮುಗಿಸಿದರೆ ನಾವೇನು ಮಾಡೋಣ ಎಂದು ಸವಡಿ, ಕಲ್ಲಕುಂಟ್ಲಾ ಸೇರಿದಂತೆ ಇತರರ ಕಾಲೆಳೆದರು. ಆಗ ವಾಗ್ವಾದ ಮತ್ತಷ್ಟು ಜೋರಾಯಿತು. ಪ್ರತಿಪಕ್ಷದವರು, ನಿಮ್ಮ ಸರ್ಕಾರ ಇದ್ದಾಗಲೇ ನಿರಂತರ ಯೋಜನೆಯ ಗುತ್ತಿಗೆ ನೀಡಿದೆ ಎಂದು ಆರೋಪಿಸಿದರೆ, ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ನಿರಂತರ ನೀರು ಯೋಜನೆ ಕುರಿತಂತೆ ಏನೇನು ಮಾಡಿದೆ ಎಂಬುದನ್ನು ನಾನು ಚರ್ಚಿಸುತ್ತೇನೆ ಎಂದು ಸವಡಿ ಹೇಳಿದರು.

ಹೀಗೆ ಕೆಲಕಾಲ ಆರೋಪ- ಪ್ರತ್ಯಾರೋಪ ನಡೆಯುತ್ತಿದ್ದಾಗಲೇ ಅತ್ತ ಮೇಯರ್‌ ವೀಣಾ ಬರದ್ವಾಡ, ಕುಡಿಯುವ ನೀರಿನ ಬಜೆಟ್‌ ಪಾಸ್‌ ಆಗಿದೆ ಎಂದು ರೂಲಿಂಗ್‌ ನೀಡಿ ಸಭೆಯನ್ನು ಬರ್ಖಾಸ್ತುಗೊಳಿಸಿದರು.ನೀರಸಾಗರ ಪ್ರಸ್ತಾಪವೇಕಿಲ್ಲ;

ನಿರಂತರ ನೀರು ಯೋಜನೆ ವಿಷಯವಾಗಿ ಪಾಲಿಕೆ ಮಂಡಿಸಿದ ಬಜೆಟ್‌ನಲ್ಲಿ ನೀರಸಾಗರದ ಬಗ್ಗೆ ಪ್ರಸ್ತಾಪವೇ ಇಲ್ಲ. ನೀರಸಾಗರದಿಂದ ಬರೋಬ್ಬರಿ 22 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಆ ಬಗ್ಗೆಯೇಕೆ ಪ್ರಸ್ತಾಪಿಸುತ್ತಿಲ್ಲ ಎಂದು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಪ್ರಸ್ತಾಪಿಸಿದರು. ಆದರೆ ಇದಕ್ಕೆ ಅಧಿಕಾರಿಗಳ ಬಳಿ ಸರಿಯಾದ ಉತ್ತರವೇ ಇರಲಿಲ್ಲ. ಹೀಗಾಗಿ ತಡಬಡಿಸಿದರು. ಇನ್ನು ಎಲ್‌ಆ್ಯಂಡ್‌ಟಿ ಯೋಜನೆಯಡಿ ಬರೋಬ್ಬರಿ 300 ಕಿಮೀ ಅತ್ಯಂತ ಕಳಪೆ ಮಟ್ಟದ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಇದನ್ನು ಆಕ್ಷೇಪಿಸಿದ ಬಳಿಕ ಬದಲಿಸಲು ನಿರ್ಧರಿಸಲಾಗಿದೆ. ತಿರಸ್ಕರಿಸಿದ ಪೈಪ್‌ಲೈನ್‌ ಅಳವಡಿಸಿದ್ದಕ್ಕೆ ₹34 ಕೋಟಿ ಎಲ್‌ಆ್ಯಂಡ್‌ಟಿ ಕಂಪನಿಗೆ ದಂಡ ವಿಧಿಸಲಾಗಿತ್ತು. ಅದನ್ನು 11 ಕೋಟಿಗೆ ಇಳಿಸಲಾಗಿದೆ. ದಂಡವನ್ನು ಕಡಿಮೆ ಮಾಡಲು ಬರುತ್ತದೆಯೇ? ಎಂದು ಪ್ರಶ್ನಿಸಿದರು.

ವಸೂಲಿ ಏಕೆ ಆಗಿಲ್ಲ

ಮಹಾನಗರದ ಬರೋಬ್ಬರಿ 144 ಕೋಟಿ ನೀರಿನ ಕರ ವಸೂಲಿ ಮಾಡಿಕೊಂಡಿಲ್ಲ, ಬಾಕಿಯುಳಿಸಿಕೊಂಡಿದೆ. ಅದನ್ನು ವಸೂಲಿ ಮಾಡಲು ಯೋಜನೆಯನ್ನಾದರೂ ಹಾಕಿಕೊಂಡಿದೆಯೇ? ಎಂದು ಮಾಜಿ ಮೇಯರ್‌ ವೀರಣ್ಣ ಸವಡಿ ಕೇಳಿದರು. ಆದರೆ ಇದಕ್ಕೂ ಅಧಿಕಾರಿಗಳ ಬಳಿ ಸಮರ್ಪಕ ಉತ್ತರವಿರಲಿಲ್ಲ. ಹಿಂದೆ ಪಾಲಿಕೆಯೇ ನೀರು ಸರಬರಾಜು ಮಾಡುತ್ತಿತ್ತು. ಅದನ್ನು 2003ರಲ್ಲಿ ಒಳಚರಂಡಿ ಮಂಡಳಿಗೆ ವಹಿಸಲಾಯಿತು. ಆಗಲೇ ಪಾಲಿಕೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಎಲ್‌ಆ್ಯಂಡ್‌ಟಿ ಕಂಪನಿಗೆ ವಹಿಸಲಾಗಿದೆ. ನೀರನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ನೋಡ್ತಾ ಇರಿ ಎಂದು ಆಗಲೇ ಹೇಳಿದ್ದೇವು ಎಂದು ನೆನಪಿಸಿಕೊಂಡರು. ₹9200 ಹೊಸ ಮೀಟರ್‌ ಅಳವಡಿಸುವ ಕುರಿತಂತೆಯೂ ಬಜೆಟ್‌ನಲ್ಲಿ ಉಲ್ಲೇಖವಿಲ್ಲ ಎಂದು ಖಾರವಾಗಿ ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಲ್‌ಆ್ಯಂಡ್‌ಟಿ ಕಂಪನಿಯ ನಡೆಸುವ ವ್ಯವಹಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಮಹಾನಗರದ ವ್ಯಾಪ್ತಿ ಬರೀ 220 ಚದುರ ಕಿಮೀ ಎಂದು ತೋರಿಸಲಾಗಿದೆ. ಆದರೆ ಈಗಾಗಲೇ 400 ಕಿಮೀ ವ್ಯಾಪ್ತಿಹೊಂದಿದೆ ಎಂದು ಸಿಡಿಪಿ ಹೇಳುತ್ತಿದೆ. ಆದರೂ ಹೊಸ ಬಡಾವಣೆಗಳನ್ನು ಸೇರಿಕೊಂಡಿಲ್ಲ. ಮೊದಲು ಹೊಸ ಸಿಡಿಪಿಯಂತೆ ಪ್ರದೇಶ, ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಬೇಕು. ತದನಂತರ ಯೋಜನೆ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ನಿರಂತರ ನೀರು ಯೋಜನೆಯಿಂದ ಬಡಾವಣೆಗಳು ಬಿಟ್ಟು ಹೋಗಲಿವೆ ಎಂದು ಸವಡಿ ಸಭೆ ಗಮನಕ್ಕೆ ತಂದರು.

ಸಿಗದ ಸಮರ್ಪಕ ಉತ್ತರ

ಒಂದು ಮನೆಯಲ್ಲಿ ಮೂರ್ನಾಲ್ಕು ಜನ ಅಣ್ಣತಮ್ಮಂದಿರರು ಪ್ರತ್ಯೇಕವಾಗಿಯೇ ವಾಸವಾಗಿರುತ್ತಾರೆ. ಅಂಥ ಮನೆಗಳಿಗೂ ಒಂದೇ ನಳ ಅಳವಡಿಸಲಾಗುತ್ತಿದೆ. ಒಂದೇ ನಳದಲ್ಲಿ ಎಲ್ಲ ಮನೆಗಳಿಗೆ ನೀರು ಪಡೆದುಕೊಳ್ಳಬಹುದೇ ಎಂದು ಪ್ರತಿಪಕ್ಷದ ಸದಸ್ಯ ಸಂದೀಲಕುಮಾರ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ನಿಯಮದಂತೆ ಸಂಪರ್ಕ ಪಡೆಯಬಹುದು ಎಂದಷ್ಟೇ ಹೇಳಿದರು.