ಸಾರಾಂಶ
ಬೆಂಗಳೂರು : ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವೇ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಜಾರಿಗೆ ತರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಗುರುವಾರ ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಆಶಾಕಿರಣ ಶಾಶ್ವತ ದೃಷ್ಟಿ ಕೇಂದ್ರ’ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಿದ್ಧಪಡಿಸುತ್ತಿದ್ದು, ಎರಡು ಮೂರು ವಾರದಲ್ಲಿ ವರದಿ ಸಲ್ಲಿಕೆ ಆಗಲಿದೆ. ಬಿಬಿಎಂಪಿ ಅಡಿ ನಗರದ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನಿರ್ವಹಣೆ ಆಗುತ್ತಿದ್ದರೆ, ವೈದ್ಯಕೀಯ ಇಲಾಖೆಯಿಂದ ವೈದ್ಯರು, ಸಿಬ್ಬಂದಿ ಇರುತ್ತಿದ್ದರು. ಇದರಿಂದ ಸಾಕಷ್ಟು ಗೊಂದಲ ಉಂಟಾಗಿ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಹಾಗೂ ನಗರದ ಜನತೆಯ ಹಿತದೃಷ್ಟಿಯಿಂದ ಪ್ರತ್ಯೇಕ ಆರೋಗ್ಯ ನೀತಿ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 11 ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಐದು ಕೇಂದ್ರಗಳು ಸೈಟ್ ಸೇವರ್ಸ್ ಇಂಡಿಯಾ ಕಂಪನಿಯ ಸಿಎಸ್‌ಆರ್ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಕನ್ನಡಕ ವಿತರಣೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಒನ್‌ಸೈಟ್ ಎಸ್ಸಿಲೊರ್ ಲುಕ್ಸೊಟಿಕಾ ಫೌಂಡೇಷನ್ ಸೇರಿ ಒಟ್ಟು 13 ಅಶಾಕಿರಣ ದೃಷ್ಟಿ ಕೇಂದ್ರಗಳು ವಿವಿಧ ಸಿಎಸ್‌ಆರ್ ಪಾಲುದಾರರ ಸಹಭಾಗಿತ್ವದಲ್ಲಿ ಸ್ಥಾಪನೆ ಆಗಿವೆ.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪಕ್ಕೆ ಪ್ರಿಯಕೃಷ್ಣ ಒತ್ತಡ: ಡಿಕೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಬೇಕು ಎಂದು ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೇವಲ ಕಟ್ಟಡ ಮಾತ್ರ ಉತ್ತಮವಾಗಿ ಕಟ್ಟಿದ್ದು, ಕೆಲ ಕೊರತೆಗಳಿವೆ. ಇದನ್ನು ಸರಿಪಡಿಸಲಾಗುವುದು. ಮಾರುಕಟ್ಟೆ ದರದ ಶೇ. 25ರಷ್ಟು ಮಾತ್ರ ಹಣ ತೆಗೆದುಕೊಂಡು. ಎಂಆರ್‌ಐ, ಸಿಟಿ ಸ್ಕ್ಯಾನ್ ಸೇವೆ ನೀಡುವ ಆಲೋಚನೆಯೂ ಇದೆ ಎಂದು ಅವರು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))