ಎಸ್ಸಿ ಸರ್ವೆ ಬಗ್ಗೆ ಪ್ರಶ್ನಿಸಿದವರಿಗೆ ಪಾಲಿಕೆ ಸಿಬ್ಬಂದಿ ಹಲ್ಲೆ

| N/A | Published : Jul 04 2025, 01:02 AM IST / Updated: Jul 04 2025, 06:34 AM IST

ಸಾರಾಂಶ

ಪರಿಶಿಷ್ಟ ಜಾತಿ ಸಮೀಕ್ಷೆ ವೇಳೆ ಮನೆ ಸದಸ್ಯರ ಯಾವುದೇ ಮಾಹಿತಿ ಕೇಳದೆ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕರ ಮೇಲೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಕುರಿತು ಸಾಕಷ್ಟು ಆರೋಪ ಕೇಳಿ ಬರುತ್ತಿವೆ 

 ಬೆಂಗಳೂರು :  ಪರಿಶಿಷ್ಟ ಜಾತಿ ಸಮೀಕ್ಷೆ ವೇಳೆ ಮನೆ ಸದಸ್ಯರ ಯಾವುದೇ ಮಾಹಿತಿ ಕೇಳದೆ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕರ ಮೇಲೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಕುರಿತು ಸಾಕಷ್ಟು ಆರೋಪ ಕೇಳಿ ಬರುತ್ತಿವೆ. ದಿನದಿಂದ ದಿನಕ್ಕೆ ನಗರದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ.

ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿರುವ ನಂದೀಶ್ ಎಂಬವರ ಮನೆಗೆ ಹೋಗಿದ್ದ ಬಿಬಿಎಂಪಿ ಸಿಬ್ಬಂದಿ ಮನೆಯವರನ್ನು ಯಾವುದೇ ಪ್ರಶ್ನೆ ಮಾಡದೆ ಜಾತಿಗಣತಿ ಪೂರ್ಣಗೊಂಡಿದೆ ಎಂಬ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕನ ಮಗ ಶಶಾಂಕ್, ನಾವು ಎಲ್ಲರೂ ಮನೆ ಒಳಗಡೆ ಇದ್ದೆವು. ಆಗ ಪೌರಕಾರ್ಮಿಕರು ಮನೆಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ನಮ್ಮ ತಂದೆ ಪ್ರಶ್ನಿಸಿದ್ದಾರೆ. ಸರ್ವೇ ಮಾಡಿಲ್ಲ, ದಾಖಲೆ ಎಲ್ಲಿ ಎಂದು ಪ್ರಶ್ನೆ ಮಾಡಿದೆವು. ಇದಕ್ಕೆ ಸಿಬ್ಬಂದಿ ಪ್ರತಿಕ್ರಿಯೆ ನೀಡಿ, ಇದು ನನಗೆ ಕೊಟ್ಟಿರೋ ಟಾಸ್ಕ್ ಎಂದಿದ್ದರು. ನಂತರ ಒಂದು ಗಂಟೆ ಬಳಿಕ ಮೇಲ್ವಿಚಾರಕರ ಜತೆಗೆ ಬಂದು ತಮ್ಮ ಅಪ್ಪನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು, ಕೆನ್ನೆಗೆ ಹೊಡೆದಿದ್ದಾರೆ. ಅವರು ಗುರುತಿನ ಚೀಟಿ ಸಹ ತಂದಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ದೂರಿದ್ದಾರೆ.

ಹಲ್ಲೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಈ ವೇಳೆ ಅಲ್ಲಿಗೆ ಬಂದ ಬಿಬಿಎಂಪಿ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಇದರಿಂದ ದೂರು ಕೊಡದೇ ವಾಪಸ್ ಪಡೆಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಕ್ಕೆ ಗಲಾಟೆ:

ಸಮೀಕ್ಷೆ ಮಾಡದೆ ಮನೆ ಮುಂದೆ ಸ್ಟಿಕ್ಕರ್ ಅಂಟಿಸಲಾಗಿತ್ತು. ಈ ವಿಚಾರವಾಗಿ ಸುದ್ದಿ ವಾಹಿನಿಗೆ ಮಾಹಿತಿ ನೀಡುತ್ತಿದ್ದ ವೇಳೆ ಬಿಬಿಎಂಪಿ ಸಿಬ್ಬಂದಿ ಮನೆ ಮುಂದೆ ಗಲಾಟೆ ಮಾಡಿದ್ದಾರೆ ಎಂದು ಇಟ್ಟಮಡು 3ನೇ ಹಂತದ ಬಿ.ಪಿ. ನಟರಾಜ್ ದೂರಿದ್ದಾರೆ. ಬಿಬಿಎಂಪಿಯ ಸಿಬ್ಬಂದಿ ಸುಮಲತಾ ಹಾಗೂ ಓರ್ವ ಯುವಕ ಬಂದು ಗಲಾಟೆ ಮಾಡಿದ್ದಾರೆ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.

ಇದೆಲ್ಲದರ ನಡುವೆ ಮನೆಯ ಸದಸ್ಯರನ್ನು ಮಾತನಾಡಿಸದೆ ಕಾಟಾಚಾರಕ್ಕೆ ಕಂಡ ಕಂಡ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ. ವಿಪರ್ಯಾಸವೆಂದರೆ ಈ ಸಮೀಕ್ಷೆಗೆ ಪೌರಕಾರ್ಮಿಕರು, ಜಲಮಂಡಳಿಯ ಸಿಬ್ಬಂದಿಗಳನ್ನೂ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಕರ್ತವ್ಯ ಲೋಪದಡಿ ಮೂವರು ಅಮಾನತು

ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಸರ್ವೇ ಖಾತರಿಪಡಿಸಿಕೊಳ್ಳುವುದಕ್ಕೆ ಮನೆ ಮನೆ ಸ್ಟಿಕ್ಕರ್‌ ಅಂಟಿಸುವುದಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿಕೊಂಡ ಎಚ್‌ಬಿಆರ್‌ ಲೇಔಟ್‌ನ ಕಂದಾಯ ಪರಿವೀಕ್ಷಕ ರಮೇಶ್, ಕಂದಾಯ ವಸೂಲಿ ಪೆದ್ದರಾಜು ಹಾಗೂ ಹೆಮ್ಮಿಗೆಪುರ ವಾರ್ಡ್‌ನ ಕಂದಾಯ ವಸೂಲಿ ಅಧಿಕಾರಿ ಸಿ ಸೆಂದಿಲ್‌ ಅವರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿ ಆದೇಶಿಸಲಾಗಿದೆ. ಇನ್ನೂ ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರ ಹಾಗೂ ಇಟ್ಟುಮಡು ಘಟನೆಗಳಿಗೆ ಸಂಬಂಧಿಸಿದಂತೆ ಹೆಲ್ಲೆಗೆ ಯತ್ನಿಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಬಿಬಿಎಂಪಿಯ ಸಿಬ್ಬಂದಿಯನ್ನು ಅಮಾನತುಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read more Articles on