ಪಾಲಿಕೆಗೆ ಪ್ರತ್ಯೇಕ ಸರ್ವೆ ವಿಭಾಗ: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

| Published : May 26 2024, 01:33 AM IST / Updated: May 26 2024, 06:50 AM IST

ಪಾಲಿಕೆಗೆ ಪ್ರತ್ಯೇಕ ಸರ್ವೆ ವಿಭಾಗ: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತ್ಯೇಕ ಸರ್ವೆ ವಿಭಾಗ ರಚಿಸಲು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು.

 ಬೆಂಗಳೂರು :  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಲೀಕತ್ವದ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿಗಳ ಸರ್ವೆ, ಸಂರಕ್ಷಣೆ ಹಾಗೂ ಭೂ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಪ್ರತ್ಯೇಕ ಸರ್ವೆ ವಿಭಾಗ ರಚಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆ, ರಾಜಕಾಲುವೆಗಳ ಸರ್ವೆ, ಒತ್ತುವರಿ ಗುರುತು, ರಸ್ತೆ ವಿಸ್ತರಣೆ ಸೇರಿದಂತೆ ಇನ್ನಿತರೆ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳುವ ಸ್ವತ್ತುಗಳ ಸರ್ವೆ ಕಾರ್ಯಕ್ಕೆ ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯನ್ನು ಅವಲಂಬಿಸಬೇಕಿದೆ. ಆದರೆ, ಇಲಾಖೆಯು ಸಕಾಲಕ್ಕೆ ಭೂಮಾಪಕರನ್ನು ನಿಯೋಜಿಸುತ್ತಿಲ್ಲ. ಹೀಗಾಗಿ ರಾಜಕಾಲುವೆ ಒತ್ತುವರಿ ಸರ್ವೆ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ತೆರವು ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಮಾದರಿಯಲ್ಲಿಯೇ ಬಿಬಿಎಂಪಿಯ ಸರ್ವೆ ವಿಭಾಗವನ್ನು ರಚಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅಗತ್ಯವಿರುವ ಡಿಡಿಎಲ್‌ಆರ್‌, ಎಡಿಎಲ್‌ಆರ್‌, ಭೂಮಾಪಕರು ಹಾಗೂ ಇತರೆ ಹುದ್ದೆಗಳ ಸೃಜನೆಗೆ ಅನುಮೋದನೆ ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಜತೆಗೆ ಪಾಲಿಕೆಯು ಸಾವಿರಾರು ಕೋಟಿ ರುಪಾಯಿ ಮೌಲ್ಯದ 7 ಸಾವಿರ ಆಸ್ತಿಗಳ ಮಾಲೀಕತ್ವ ಹೊಂದಿದೆ. ಆದರೆ, ಈ ಸ್ವತ್ತುಗಳಿಗೆ ಸಂಬಂಧಿಸಿದ ಸರ್ವೆ ನಕ್ಷೆಗಳು ಹಾಗೂ ಭೂ ದಾಖಲೆಗಳು ಲಭ್ಯವಿಲ್ಲ. ಪಾಲಿಕೆ 20 ಲಕ್ಷಕ್ಕೂ ಅಧಿಕ ಆಸ್ತಿಗಳಿಂದ ತೆರಿಗೆ ವಸೂಲು ಮಾಡುತ್ತಿದೆ. ಆದರೆ, ಈ ಆಸ್ತಿಗಳಿಗೆ ನಕ್ಷೆಯೇ ಇಲ್ಲ. ಸರ್ವೆ ನಕ್ಷೆ, ಸ್ವತ್ತಿನ ಮಾಲೀಕತ್ವ ಮತ್ತು ದಾಖಲೆಗಳ ನಿರ್ವಹಣೆಯು ಸಂಪೂರ್ಣ ಸರಿಯಾಗಿಲ್ಲ. ಸಮರ್ಪಕ ಆಡಳಿತ ನಿರ್ವಹಣೆಯಿಂದ ಬೆಲೆ ಬಾಳುವ ಸರ್ಕಾರಿ ಭೂಮಿಯ ರಕ್ಷಣೆ ಹಾಗೂ ಸೂಕ್ತ ನಕ್ಷೆಗಳಿಂದ ಖಾಸಗಿ ಸ್ವತ್ತುಗಳ ದಾಖಲೆಗಳನ್ನು ನಿರ್ವಹಿಸಲು ಸಾಧ್ಯ ಎಂದು ಪಾಲಿಕೆ ಪ್ರತ್ಯೇಕ ಸರ್ವೆ ರಚನೆಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

211 ಅಧಿಕಾರಿ ಸಿಬ್ಬಂದಿ ಅಗತ್ಯ

ಇಬ್ಬರು ಭೂ ದಾಖಲೆಗಳು ಉಪ ನಿರ್ದೇಶಕರು (ಡಿಡಿಎಲ್‌ಆರ್‌), 9 ಸಹಾಯಕ ಭೂ ದಾಖಲೆಗಳು ನಿರ್ದೇಶಕರು (ಎಡಿಎಲ್‌ಆರ್‌), 24 ಮಲ್ವಿಚಾರಕರು, 79 ಸರ್ವೇಯರ್‌, 6 ಎಫ್‌ಡಿಎ. 4 ಎಸ್‌ಡಿಎ, 7 ಲಿಪಿಕಾರರು ಸೇರಿದಂತೆ ಒಟ್ಟು 211 ಹುದ್ದೆಗಳನ್ನು ಮಂಜೂರು ಮಾಡಬೇಕು. ಇವರಿಗೆ ಪ್ರತಿ ವರ್ಷ ವೇತನಕ್ಕೆ ₹6 ಕೋಟಿ ಬೇಕಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.