ಯೂರಿಯಾ ರಸಗೊಬ್ಬರ ಸಂಗ್ರಹವಿದ್ದರೂ ಖರೀದಿ ಮಾಡಲು ಸರ್ವರ್‌ ಸಮಸ್ಯೆ ಎದುರಾಗಿದೆ.

ಹೂವಿನಹಡಗಲಿ: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೆಲವೆಡೆ ರೈತರು, ಬಿತ್ತನೆಗೆ ಸಿದ್ಧತೆ ಮಾಡಿಕೊಂಡರೆ ಉಳಿದ ಕಡೆಗಳಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಅಗತ್ಯವಿರುವ ಯೂರಿಯಾ ರಸಗೊಬ್ಬರ ಬೇಡಿಕೆ ಹೆಚ್ಚಿದೆ. ಎಫ್‌ಐಡಿ ಮಾಡಿದ ರೈತರಿಗೆ ಮಾತ್ರ ಯೂರಿಯಾ ರಸಗೊಬ್ಬರ ಸಿಗಲಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ವಿತರಣೆಗೆ ತೊಡಕಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ರಸಗೊಬ್ಬರ ಸಂಗ್ರಹವಿದ್ದರೂ ಖರೀದಿ ಮಾಡಲು ಸರ್ವರ್‌ ಸಮಸ್ಯೆ ಎದುರಾಗಿದೆ. ಈ ಕುರಿತು ಅಂಗಡಿಗಳ ಮಾಲಿಕರು ಕೃಷಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಸಮಸ್ಯೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೈತರಿಗೆ ಅಗತ್ಯವಿರುವ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ಉಳಿದಂತೆ ಇತರೆ ರಸಗೊಬ್ಬರ ದಾಸ್ತಾನು ಇದೆ.

ತಾಲೂಕಿನ ಬಹುತೇಕ ಕಡೆ ರೈತರಿಗೆ ಮೆಕ್ಕೆಜೋಳ, ಹೈಬ್ರೀಡ್‌ ಜೋಳ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಕಾರ್ಯ ಜೋರಾಗಿ ನಡೆಯುತ್ತಿದೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನು ಬಿತ್ತನೆ ಬೀಜ ಮಾರಾಟ ಆರಂಭವಾಗಿಲ್ಲ. ಇದರಿಂದ ರೈತರು ಬಿತ್ತನೆ ಬೀಜ ಮಾರಾಟಗಾರರ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಖರೀದಿ ಮಾಡುವಂತಾಗಿದೆ.

ಸಕಾಲದಲ್ಲಿ ರೈತರಿಗೆ ಮೆಕ್ಕೆಜೋಳ ಬಿತ್ತನೆ ಬೀಜ ರಿಯಾಯ್ತಿ ದರದಲ್ಲಿ ಸಿಗುತ್ತಿಲ್ಲ. ಬಿತ್ತನೆ ಬೀಜ ಮಾರಾಟಗಾರರ ಬಳಿ ದುಬಾರಿ ಬೆಲೆಯ ಹತ್ತಾರು ಕಂಪನಿಗಳ ಗುಣಮಟ್ಟದ ಮೆಕ್ಕೆಜೋಳ ಬೀಜ ಇವೆ. ಆದರೆ ರೈತರು ನಕಲಿ ಮೆಕ್ಕೆಜೋಳ ಖರೀದಿಗೆ ಮುಂದಾಗಿದ್ದಾರೆಂಬ ದೂರು ಕೇಳಿ ಬರುತ್ತಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಹಳ್ಳಿಗಳಲ್ಲಿ ಪ್ರತಿ ವರ್ಷ ನಕಲಿ ಮೆಕ್ಕೆಜೋಳ ಮಾರಾಟದ ದೊಡ್ಡ ಜಾಲವೇ ಇದೆ. ಇಂತಹ ವ್ಯವಸ್ಥೆಯನ್ನು ಮಟ್ಟ ಹಾಕಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಆದರೆ ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಸಿಗುತ್ತದೆ ಎಂಬ ಕಾರಣಕ್ಕಾಗಿ ಅಜ್ಞಾತ ಸ್ಥಳಗಳಲ್ಲಿ ಸಂಗ್ರಹಿಸಿರುವ ನಕಲಿ ಬೀಜಗಳ ಖರೀದಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ನಕಲಿ ಬಿತ್ತನೆ ಬೀಜ ಮಾರಾಟ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕೆಂಬ ಎಚ್ಚರಿಕೆ ಇದ್ದರೂ ಇದಕ್ಕೆ ಜಗ್ಗದ ನಕಲಿ ಬಿತ್ತನೆ ಬೀಜ ಮಾರಾಟ ಜಾಲ ರಾತ್ರಿ ವೇಳೆ ದಂಧೆ ನಡೆಯುತ್ತಿದೆ ಎಂದು ರೈತರೇ ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಹೊಲಗಳನ್ನು ಉಳುಮೆ ಮಾಡಿದ್ದೇವೆ. ಉತ್ತಮ ಮಳೆಯಾಗಿದೆ. ಬಿತ್ತನೆ ಮಾಡುವ ಸಮಯ ಬಂದಿದೆ. ಆದರೆ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ಕೇಳಿದರೆ ಸರ್ವರ್‌ ಸಮಸ್ಯೆ ಇದೆ ಎಂದು ಹೇಳುತ್ತಾರೆ. 2-3 ತಾಸು ಕಾಯ್ದು ಸುಸ್ತಾಗಿದ್ದೇವೆ ಎನ್ನುತ್ತಾರೆ ರೈತ ಭೀಮಪ್ಪ ಹೊಳೆಯಾಚೆ.

ಯಾರಿಯಾ ಸೇರಿದಂತೆ ಇತರೆ ರಸಗೊಬ್ಬರ ದಾಸ್ತಾನು ಇದೆ. ಯೂರಿಯಾ ಖರೀದಿಗೆ ರೈತರು ಎಫ್‌ಐಡಿ ಮಾಡಿಸಿದ್ದಾರೆ. ಎಫ್‌ಐಡಿ ಮೂಲಕ ಯೂರಿಯಾ ಮಾರಾಟಕ್ಕೆ ಸರ್ವರ್‌ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ರಸಗೊಬ್ಬರ ಅಂಗಡಿ ಮಾಲೀಕ.