ಅಧಿಕಾರ, ಅಂತಸ್ತು ಶಾಶ್ವತವಲ್ಲ. ಸಮಾಜಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆಯೇ ಶಾಶ್ವತವಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ನರಸಿಂಹರಾಜಪುರ: ಅಧಿಕಾರ, ಅಂತಸ್ತು ಶಾಶ್ವತವಲ್ಲ. ಸಮಾಜಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆಯೇ ಶಾಶ್ವತವಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ಸೇಂಟ್ ಜಾರ್ಜ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಗಣರಾಜ್ಯೋತ್ಸವ ಅಂಗವಾಗಿ ಕೋಟೆ ಹುಡುಗರ ಬಳಗದ ವತಿಯಿಂದ ಆಯೋಜಿಸಿದ್ದ ಆರೋಗ್ಯ ಸೇವಾ ಕಪ್ ಥರ್ಟಿಯಾರ್ಡ್ ಸರ್ಕಲ್ ಕ್ರಿಕೆಟ್ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶವ ಶೈತ್ಯಾಗಾರ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿ ಮಂದಿರದ ವ್ಯಾಪ್ತಿಯಲ್ಲಿನ ಯುವಕರು ಕೋಟೆ ಹುಡುಗರ ಬಳಗ ಸ್ಥಾಪಿಸಿಕೊಂಡು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧ ಭಾವವಿಲ್ಲದೆ ಕೋಮು ಸಾಮರಸ್ಯ ಕಾಪಾಡಿಕೊಂಡು ಅನ್ಯೋನ್ಯತೆಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಹಾಗೂ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಚೈತನ್ಯಯುವಕ ಸಂಘ, ಎಂ.ಶ್ರೀನಿವಾಸ್ ಅಭಿಮಾನಿ ಬಳಗ ಹಾಗೂ ಕೋಟೆ ಹುಡುಗರ ಬಳಗ ಸೇರಿ ನರಸಿಂಹರಾಜಪುರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರತಿ ಮನೆಗೂ ಆಹಾರ ಸಾಮಗ್ರಿ ಕಿಟ್ ತಲುಪಿಸುವ ಕೆಲಸ ಮಾಡಿದ್ದರು. ಪ್ರಸ್ತುತ ಕ್ರಿಕೆಟ್ ಪಂದ್ಯಾವಳಿ ಜತೆಗೆ ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಶವ ಶೈತ್ಯಾಗಾರ ಪೆಟ್ಟಿಗೆ ಹಸ್ತಾಂತರಿಸುವ ಕಾರ್ಯ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಆಸ್ಪತ್ರೆ ರಕ್ಷಾ ಸಮಿತಿಯ ಸದಸ್ಯರಾಗಿದ್ದ ಕೋಟೆಹುಡುಗರ ಬಳಗದ ಅಧ್ಯಕ್ಷ ಶ್ರೀಧರ್ ಆಸ್ಪತ್ರೆಯಲ್ಲಿ ಶವ ಶೈತ್ಯಾಗಾರ ಪೆಟ್ಟಿಗೆಯ ಕೊರತೆಯಿರುವುದನ್ನು ಮನಗೊಂಡು ಅದನ್ನು ಕೊಡುಗೆಯಾಗಿ ನೀಡುವ ನಿರ್ಧಾರ ಮಾಡಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಕೋಟೆ ಹುಡುಗರ ಬಳಗದವರು ಆಸ್ಪತ್ರೆಯಲ್ಲಿ ಕಣ್ಣು, ಕಿವಿ,ಗಂಟಲು ತಜ್ಞರಿಗೆ ಅವಶ್ಯಕವಾಗಿರುವ ಯಂತ್ರವನ್ನು ಕೊಡುಗೆಯಾಗಿ ನೀಡುವ ಚಿಂತನೆಯನ್ನು ಹೊಂದಿದ್ದಾರೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಹಣದ ಹಿಂದೆ ಹೋದವರು ಹೆಸರು ಮಾಡಿದ್ದು ಕಡಿಮೆ. ಸಾಧನೆ ಮಾಡಿದವರು ಮಾತ್ರ ಸತ್ತ ನಂತರವೂ ಬದುಕುತ್ತಾರೆ. ಮನುಷ್ಯ ಹುಟ್ಟುವಾಗ ಏನನ್ನು ತರುವುದಿಲ್ಲ. ಸತ್ತಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಜೀವಂತ ಇರುವಾಗ ದಾನ ಧರ್ಮ ಮಾಡಬೇಕು. ಕ್ರೀಡಾ ಕೂಟಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ ಎಂದರು.

ಇದೇ ಸಂದರ್ಭ ಕೋಟೆ ಹುಡುಗರು ಬಳಗದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅವರಿಗೆ ಶವ ಶೈತ್ಯಾಗಾರ ಪೆಟ್ಟಿಗೆ ಹಸ್ತಾಂತರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕೋಟೆಹುಡುಗರ ಬಳಗದ ಅಧ್ಯಕ್ಷ ಶ್ರೀಧರ್ ಪಾನಿ ವಹಿಸಿದ್ದರು. ಜಯ ಕರ್ನಾಟಕ ಘಟಕದ ಅಧ್ಯಕ್ಷ ಶರತ್ ಶೆಟ್ಟಿ, ಚೌಡಿಗುಡಿ ಸಮಿತಿ ಸದಸ್ಯ ಮಂಜುನಾಥ್, ಗೋಲ್ಡನ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯ ಇಮ್ರಾನ್, ಕೋಟೆ ಹುಡುಗರ ಬಳಗದ ಸದಸ್ಯರಾದ ಗಿರೀಶ್, ಶಿವಪಾಂಡೆ, ರಮೇಶ್, ಸುಲ್ತಾನ್, ಶರೀಫ್, ಅಭಿನವ ಪ್ರತಿಭಾ ವೇದಿಕೆ ಅಧ್ಯಕ್ಷ ಅಭಿನವ ಗಿರಿರಾಜ್ ಇದ್ದರು.