ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಷ್ಟದಲ್ಲಿರುವವರ ಸೇವೆ ಭಗವಂತನಿಗೆ ಮಾಡಿದ ಸೇವೆಯಾಗಿದೆ. ಹುಟ್ಟು ಹಬ್ಬದ ಹೆಸರಿನಲ್ಲಿ ಜನಪರ ಸೇವೆ ಮಾಡುತ್ತಿರುವುದು ಸಂತಸ ತಂದಿದೆ. ತಾನು ಬೆಳೆಯುವ ಮೂಲಕ ಇತರರನ್ನು ಬೆಳೆಸುವ ಗುಣ ನಮ್ಮದಾಗಬೇಕು. ದೇಶದ ಕೋಶ ಗಟ್ಟಿಯಾಗಬೇಕಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಗುರುವಾರ, ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ-2024 ಗುರುವಂದನ-ಸೇವಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರಕೃತಿ ಮೇಲಿನ ಸವಾರಿ ನಿಲ್ಲಿಸಿ ಪ್ರಕೃತಿಯ ಜೊತೆಗೆ ಬದುಕಲು ಕಲಿಯಬೇಕು. ಮಾನವೀಯ ಮೌಲ್ಯ ನಮ್ಮೊಳಗೆ ಕಡಿಮೆಯಾಗಿದೆ. ಉಪಕಾರ ಸ್ಮರಣೆಯಲ್ಲಿ ಜೀವನ ಪಾವನವಾಗಲು ಸಾಧ್ಯ. ಜೀವನ ಸತ್ವ ಅರಿಯುವ ಕೆಲಸವಾಗಬೇಕು ಎಂದರು.ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಜನರ ಕಷ್ಟ ದುಃಖಗಳಿಗೆ ಸ್ಪಂದಿಸುವ ಕೆಲಸ ಸಮಾಜದಿಂದ ನಿರಂತರವಾಗಿ ನಡೆಯಬೇಕು. ಪ್ರಕೃತಿಯನ್ನು ಪ್ರೀತಿಸುವ ಕೆಲಸ ಎಲ್ಲರಿಂದ ನಡೆಯಬೇಕು ಎಂದರು.
ಸಾದ್ವಿ ಶ್ರೀ ಮಾತಾನಂದಮಯಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನಃಪರಿವರ್ತನೆಯಿಂದ ಸಮಾಜದ ಉದ್ಧಾರ ಸಾಧ್ಯ. ವಿದ್ಯಾರ್ಥಿಗಳು ಸುವ್ಯವಸ್ಥಿತ ಸಮಾಜದ ಬುನಾದಿಗಳು. ಸಂಸ್ಕಾರ ಕಲಿಸುವ ಕೆಲಸ ಕ್ಷೇತ್ರದ ವಿದ್ಯಾಪೀಠದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಹರೀಶ್ ಶೇರಿಗಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಶ್ರೀಕ್ಷೇತ್ರ ಧರ್ಮಸ್ಥಳದ ನಿವೃತ್ತ ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ, ಎನ್.ಐ.ಎ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕಡಂದಲೆಪರಾರಿ ಪ್ರಕಾಶ್ ಎಲ್. ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಉದ್ಯಮಿ ರವಿನಾಥ್ ವಿ. ಶೆಟ್ಟಿ, ಅಂಕ್ಷೇಶ್ವರ, ಶ್ರೀಗಳ ಜನ್ಮದಿನೋತ್ಸವ ಸಮಿತಿ ಮುಂಬೈ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಶ್ರೀಗಳ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಪನೆಯಡ್ಕ ಲಿಂಗಪ್ಪ ಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಎ ಸುರೇಶ್ ರೈ ಮತ್ತಿತರರು ಹಾಜರಿದ್ದರು.
ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಗ್ರಾಮವಿಕಾಸ ಯೋಜನೆಯ ವರದಿ ಮಂಡಿಸಿದರು.ನಿಡುವಜೆ ಶ್ರೀ ಮಹಾಬಲೇಶ್ವರ ಭಟ್ (ಪಾಮರ) ಸಂಕಲನದ ‘ಶ್ರೀಮದ್ಭಗವದ್ಗೀತಾ ತ್ರಿಭಾಷಾ’ ಶಬ್ದಾರ್ಥ ಕೋಶ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಮುಂಬೈ ಸಮಿತಿಯ ಒಡಿಯೂರು ಶ್ರೀಗುರುದೇವ ಸೇವಾಬಳಗದ ಪ್ರಕಾಶ್ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಜನ್ಮದಿನೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಬೆಳಗ್ಗೆ ೮ ಗಂಟೆಯಿಂದ ಶ್ರೀ ಗಣಪತಿ ಹವನ ನಡೆಯಿತು. 9ರಿಂದ ರವಿರಾಜ್ ಶೆಟ್ಟಿ ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಬಳಿಕ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಬಳಿಕ ಗುರುಬಂಧುಗಳಿಂದ ಜೇನುತುಪ್ಪದಲ್ಲಿ ಶ್ರೀಗಳ ತುಲಾಭಾರ ಸೇವೆ ನಡೆಯಿತು. ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿಅಪರಾಹ್ನ 3ರಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ''''''''ಒಡಿಯೂರ ಶ್ರೀ ದತ್ತಾಂಜನೇಯ'''''''' ಯಕ್ಷಗಾನ ತಾಳಮದ್ದಳೆ ನಡೆಯಿತು. ರಾತ್ರಿ ಘಂಟೆ 7 ರಿಂದ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು.