ಸಾರಾಂಶ
ರಾಜಕಾರಣಿಯೊಬ್ಬರು ಆಸ್ಪತ್ರೆ ಬಗ್ಗೆ ಅಪಪ್ರಚಾರಕ್ಕೆ ಕುಮ್ಮಕ್ಕು
- ಕುರುಬ ಸಮುದಾಯದ ಮುಖಂಡರ ಆರೋಪ ----ಕನ್ನಡಪ್ರಭ ವಾರ್ತೆ ಮೈಸೂರು
ಲೋಹಿತ್ ಅವರು ಹುಣಸೂರಿನಲ್ಲಿ ಕಾವೇರಿ ಆಸ್ಪತ್ರೆ ನಿರ್ಮಿಸಿ ಪ್ರಮುಖವಾಗಿ ಬಡ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇವರು ರಾಜಕೀಯ ಇಚ್ಛಾಸಕ್ತಿ ಹೊಂದಿದ್ದಾರೆಂಬ ತಪ್ಪು ಕಲ್ಪನೆಯಿಂದ ಸ್ಥಳೀಯ ಪ್ರಭಾವಿ ರಾಜಕಾರಣಿಯೊಬ್ಬರು ಆಸ್ಪತ್ರೆ ಬಗ್ಗೆ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತ, ಆಸ್ಪತ್ರೆ ಕೆಲಸ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆ ತಾಲೂಕುಗಳ ಕುರುಬ ಸಮುದಾಯದ ಮುಖಂಡರು ಆರೋಪಿಸಿದರು.ಈ ಆಸ್ಪತ್ರೆ ಕೋವಿಡ್ ಸಂದರ್ಭದಲ್ಲಿ ಈ ಭಾಗದ ಜನತೆಗೆ ಸಂಜೀವಿನಿಯಂತೆ ಕೆಲಸ ಮಾಡಿತು. ಇದು 100 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದೆ. ನಗರಸಭೆ ನಿಯಮದಡಿಯಲ್ಲಿಯೇ ಕಟ್ಟಡ ನಿರ್ಮಿಸಲಾಗಿದೆ ಎಂದು ತಾಪಂ ಮಾಜಿ ಸದಸ್ಯ ಗಣಪತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಆದರೆ, ಕೆಲವು ರಾಜಕಾರಣಿಗಳ ಕುಮ್ಮಕ್ಕಿನಿಂದ ನಗರಸಭೆ ಅಧಿಕಾರಿಗಳು ನಕ್ಷೆಗೆ ಅನುಗುಣವಾಗಿ ಕಟ್ಟಿಲ್ಲ ಎಂದು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದಾಗ, ಸಂಬಂಧಿಸಿದ ನಿರ್ಧಾರ ನಗರಸಭೆಯೇ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ. ಹೀಗಿದ್ದರೂ ಕೆಲ ರಾಜಕಾರಣಿಗಳು ಆಸ್ಪತ್ರೆ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ದೂರಿದರು.ನಗರಸಭಾ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ವಿರುದ್ಧವಾಗಿ ನಗರಸಭಾ ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸಿದ ಕಾರಣ ವಿಶೇಷ ಸಾಮಾನ್ಯ ಸಭೆಯಲ್ಲಿ ತಡೆಯಾಜ್ಞೆ ನೀಡಲಾಗಿದೆ. ಆದರೆ, ಪ್ರಭಾವಿ ರಾಜಕಾರಣಿ 20 ವರ್ಷ ರಾಜಕಾರಣ ಮಾಡಿದ್ದರೂ ತಾಲೂಕಿಗೆ ಯಾವುದೇ ಉತ್ತಮ ಸೇವೆ ಸಲ್ಲಿಸದೇ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕುರುಬ ಸಮುದಾಯ ಬೆಳೆಯಲು ಬಿಡುತ್ತಿಲ್ಲ. ಈಗ ಆಸ್ಪತ್ರೆ ಮಾಲೀಕ ಲೋಹಿತ್ ಎಲ್ಲಿ ರಾಜಕೀಯಕ್ಕೆ ಬರುತ್ತಾರೆಯೋ ಎಂಬ ಅಂಜಿಕೆಯಿಂದ ಅವರ ವಿರುದ್ಧ ಹಲವರನ್ನು ಎತ್ತಿಕಟ್ಟಿ ಆಸ್ಪತ್ರೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಇದೇ ಧೋರಣೆ ಮುಂದುರಿಸಿದರೆ ಮುಂದಿನ ಚುನಾವಣೆಯಲ್ಲಿ ಈ ಭಾಗದ ಕುರುಬ ಸಮುದಾಯದವರು ಬುದ್ಧಿ ಕಲಿಸಬೇಕಾಗುತ್ತದೆ. ಅಲ್ಲದೆ, ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಸಮುದಾಯದ ಮುಖಂಡರಾದ ಕೃಷ್ಣೇಗೌಡ, ದಾಸೇಗೌಡ, ಶ್ರೀನಿವಾಸ್, ಆರ್. ರವಿ, ಮುರಳೀಧರ್ ಇದ್ದರು.