ವಿಕಲಚೇತನ ಮಕ್ಕಳಲ್ಲಿ ಇರುವ ಅವರ ಅಂಗವೈಕ್ಯತೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಗುಣಪಡಿಸುವ ನಿಟ್ಟಿನಲ್ಲಿ ಸರ್ಕಾರವು ಇಂತಹ ವೈದ್ಯಕೀಯ ತಪಾಸಣೆಯ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ.

ಕೊಪ್ಪಳ: ವಿಕಲಚೇತನ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟು ಶ್ರೇಷ್ಠವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದರು.

ಅವರು ನಗರದ ಉರ್ದು ಸರ್ಧಾರಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣೆಯ ಶಿಬಿರ ಉದ್ಘಾಟಿಸಿ ಮಾತನಾಡಿ, ವಿಕಲಚೇತನ ಮಕ್ಕಳಲ್ಲಿ ಇರುವ ಅವರ ಅಂಗವೈಕ್ಯತೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಗುಣಪಡಿಸುವ ನಿಟ್ಟಿನಲ್ಲಿ ಸರ್ಕಾರವು ಇಂತಹ ವೈದ್ಯಕೀಯ ತಪಾಸಣೆಯ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ. ವಿಕಲಚೇತನ ಮಕ್ಕಳ ಪಾಲಕರು-ಪೋಷಕರು ಆ ಮಕ್ಕಳ ಪಾಲನೆ ಹಾಗೂ ಪೋಷಣೆ ಮಾಡುವ ಜತೆ ಜತೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಕಾರ್ಯ ಮಾಡಬೇಕು. ಅಲ್ಲದೇ ಪಾಲಕರು ವಿಕಲಚೇತನ ಮಕ್ಕಳ ಸೇವೆ ಮಾಡುವುದರಿಂದ ದೇವರ ಸೇವೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನೌಡ ಪಾಟೀಲ ಮಾತನಾಡಿ, ವಿಕಲಚೇತನರು ತಮ್ಮಲ್ಲಿರುವ ಅಂಗವೈಕಲ್ಯತೆಯ ಕಡೆಗೆ ಹೆಚ್ಚು ಗಮನ ಹರಿಸದೇ ವಿಶಾಲ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ವಿಕಲಚೇತನರು ತಾವು ವಿಕಲಚೇತನರು ಎಂಬ ಮನೋಭಾವ ಇರಬಾರದು. ಅಂಗವಿಕಲತೆ ಯಾರು ಕೂಡಾ ಶಾಪವಾಗಿ ಪರಿಗಣಿಸದೇ ಅದನ್ನು ವರವಾಗಿ ಪರಿಗಣಿಸಬೇಕು. ಪಾಲಕರಾದವರು ತಮ್ಮ ಮಕ್ಕಳ ಅಂಗವೈಕಲ್ಯತೆಗೆ ಸಂಬಂಧಿಸಿದಂತೆ ಅನೇಕ ಶಾಲೆಗಳನ್ನು ಸರ್ಕಾರ ಪ್ರಾರಂಭ ಮಾಡಿದ್ದು, ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಕೆಲಸವಾಗಬೇಕಿದೆ. ಅಲ್ಲದೇ ವಿಕಲಚೇತನರಿಗೆ ಇರುವ ಸೌಲಭ್ಯಗಳ ಕುರಿತು ಇನ್ನೂ ಹೆಚ್ಚಿನ ರೀತಿಯ ಜಾಗೃತಿ ಹಾಗೂ ಪ್ರಚಾರದ ಅಗತ್ಯವಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಅರ್ಹರಿಗೆ ಸಿಗುವಂತಾಗಬೇಕಿದೆ ಎಂದು ಹೇಳಿದರು.

ಐ.ಈ.ಆರ್.ಟಿ.ಶಿಕ್ಷಕ ಬಲರಾಮ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಗುಡಿ, ಕ್ಷೇತ್ರ ಸಮನ್ವಯಾಧಿಕಾರಿ ಸೈಯದ ಹುಸೇನ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹೊಳಿಬಸಯ್ಯಾ, ನಫಿಜಖಾನ, ಬಸವರಾಜ ಕಮಲಾಪುರ, ಮಲ್ಲಿಕಾರ್ಜುನ ಪೂಜಾರ ಮುಂತಾದವರು ಹಾಜರಿದ್ದರು. ಐ.ಈ.ಆರ್.ಟಿ.ಶಿಕ್ಷಕ ಬಸವನಗೌಡ ಪಾಟೀಲ ಸ್ವಾಗತಿಸಿ,ಲಕ್ಷ್ಮಮಪ್ಪ ಪಲ್ಲೇದ ವಂದಿಸಿದರು.