ರೈತರು ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಹೊಡೆದುಕೊಂಡು ಸಾಲು ಸಾಲಾಗಿ ಹೊರಟಿದ್ದ ಬಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿತ್ತು.
ಗದಗ: ಜಿಲ್ಲಾದ್ಯಂತ ಎಳ್ಳು ಅಮಾವಾಸ್ಯೆಯನ್ನು ಶುಕ್ರವಾರ ರೈತರು ಭೂತಾಯಿಗೆ ಚರಗ ಚೆಲ್ಲುವ ಮೂಲಕ ಸಂಭ್ರಮದಿಂದ ಆಚರಿಸಿದರು. ವರ್ಷಾನುಗಟ್ಟಲೇ ದುಡಿದ ದೇಹಗಳು (ಭೂಮಿ, ರಾಸುಗಳು) ಸಂಭ್ರಮಿಸುವ ದಿನ. ಅನ್ನ ನೀಡುವ ಭೂ ತಾಯಿಗೆ ಸೀಮಂತ ಮಾಡಿ ಉಣಬಡಿಸುವ ಸಂತಸದ ದಿನ. ಜಿಲ್ಲೆಯ ಎಲ್ಲ ರೈತರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ನಮ್ಮ ರೈತರಿಗೆ ಎಳ್ಳು ಅಮಾವಾಸ್ಯೆ ಬಂದರೆ ಸಾಕು ಹಬ್ಬದ ಸಡಗರ ಮಾತ್ರ ಕಡಿಮೆಯಾಗಿಲ್ಲ. ರೈತರು ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಹೊಡೆದುಕೊಂಡು ಸಾಲು ಸಾಲಾಗಿ ಹೊರಟಿದ್ದ ಬಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿತ್ತು. ಮನೆಯ ಸಂಬಂಧಿಕರೆಲ್ಲ ಬಗೆ ಬಗೆಯ ಅಡುಗೆ ಮಾಡಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿದ್ದರು. ಬನ್ನಿ ಮರಕ್ಕೆ ಸೀರೆ ತೊಡಿಸಿ ಉಡಿ ತುಂಬಿ, ಕೈಗೆ ಕಂಕಣ ಕಟ್ಟಿ ಹಾಗೂ ಐದು ಕಲ್ಲುಗಳನ್ನಿಟ್ಟು ಪಂಚಪಾಂಡವರೆಂದು ಪೂಜಿಸಿ, ನಮಿಸಿದರು. ನೈವೇದ್ಯದ ಮೂಲಕ ಪೂಜೆ ಮಾಡಿ ಹುಲ್ಲಲಿಗೂ... ಚಳಾಂಬ್ರಿಗೋ ಅಂತ ಸಿಹಿ ತಿನಿಸುಗಳನ್ನು ಸುತ್ತ ಎರಚಿ ಮಳೆ ಬೆಳೆ ಚೆನ್ನಾಗಿ ಆಗಲೆಂದು ಭಕ್ತಿಯಿಂದ ಬೇಡಿಕೊಂಡರು.ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆಯಲ್ಲಿ ಭೂತಾಯಿಗೆ ಸೀಮಂತ ಕಾರ್ಯ ಮಾಡಿ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿದರು. ಮುಂಗಾರು ಫಸಲು ಬಂದಾಗ ಮಳೆ ಅಬ್ಬರವಿರುತ್ತೆ. ಭೂ ತಾಯಿಯನ್ನು ಪೂಜೆ ಮಾಡಲಾಗುವುದಿಲ್ಲ. ಹಾಗಾಗಿ ಹಿಂಗಾರು ಸಂದರ್ಭದಲ್ಲಿ ಎಳ್ಳು ಅಮಾವಾಸ್ಯೆ ವೇಳೆ ಭೂತಾಯಿಗೆ ಸೀಮಂತ ಮಾಡಲಾಗುತ್ತೆ. ದೂರದ ಊರಿನ ಸಂಬಂಧಿಕರನ್ನು ಈ ಹಬ್ಬಕ್ಕೆ ಕರೆಯುತ್ತಾರೆ. ಈ ಹಬ್ಬಕ್ಕೆ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಬಜ್ಜಿ, ವಿವಿಧ ಬಗೆಯ ಚಟ್ನಿ ತಂದು ಎಲ್ಲರೂ ಒಟ್ಟಿಗೆ ಪೂಜೆಮಾಡಿ ಒಟ್ಟಿಗೆ ಊಟ ಮಾಡಿ ಸಂಭ್ರಮಿಸಿದರು.
ಪೂಜೆ ಸಲ್ಲಿಸಿ ಸಂಭ್ರಮಿಸಿದ ಅನ್ನದಾತರುಗಜೇಂದ್ರಗಡ: ಎಳ್ಳು ಅಮಾವಾಸ್ಯೆ ಹಬ್ಬವನ್ನು ರೈತರು ಚರಗ ಚಲ್ಲಲು ಹೊಲ ಗದ್ದೆಗಳಿಗೆ ಹೋಗುವ ಮೂಲಕ ಸಂಭ್ರಮದಿಂದ ಆಚರಿಸಿದರು.ಭೂತಾಯಿಯ ಮಡಿಲಲ್ಲಿರುವ ಬನ್ನಿ ಮಹಾಕಾಳಿ ವೃಕ್ಷದ ಕೆಳಗೆ ಐದು ಕಲ್ಲುಗಳನಿಟ್ಟು ವಿಭೂತಿ, ಕುಂಕುಮ, ಧರಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ವೃಕ್ಷದ ಸುತ್ತ ಐದು ಭಾರಿ ಹುಲಲ್ಲಿಗೋ ಚಲ್ಲಂರ‍್ಗೋ ಎಂದು ಶ್ರದ್ಧಾ ಭಕ್ತಿಯಿಂದ ಘೋಷಣೆ ಹಾಕಿ, ಜೋಳ, ಕಡಲೆ, ಗೋದಿ, ಸೂರ್ಯಕಾಂತಿ ಬೆಳೆಗಳನ್ನು ಹೊಂದಿದ ಭೂತಾಯಿಯ ಮಡಿಲಲ್ಲಿ ವಿಶೇಷವಾಗಿ ತಯಾರಿಸಿದ ಸಿಹಿ ಪದಾರ್ಥಗಳನ್ನು ಹೊಲದ ತುಂಬೆಲ್ಲ ಸಿಂಪಡಿಸಿ ಭಕ್ತಿಭಾವ ಮೆರೆದರು. ನಂತರ ಸಾಮೂಹಿಕವಾಗಿ ಭೂತಾಯಿ ಮಡಿಲಲ್ಲ ಕುಳಿತು ಭೋಜನವನ್ನು ಸವಿದರು.ರೈತರು ಎಳ್ಳ ಅಮವಾಸ್ಯೆ ದಿನದಂದು ವಿಶೇಷ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಿದರು.