ಅರ್ಧ ಟಿಎಂಸಿ ನೀರಿನ ಬೇಡಿಕೆಗೆ ಎಳ್ಳು ನೀರು

| Published : Feb 01 2025, 12:45 AM IST

ಸಾರಾಂಶ

ಗಾಯತ್ರಿ ಜಲಾಶಯ ಸೇರಿ 13 ಕೆರೆಗಳಿಗೆ ನೀರು ಹರಿಸುವ ಸಂಬಂಧ ಸಚಿವ ಡಿ.ಸುಧಾಕರ್ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಿದರು.

ಮಾರಿಕಣಿವೆಯಲ್ಲಿ ನೀರಿಲ್ಲವೆಂದು ಅಧಿಕಾರಿಗಳಿಂದ ವಾಸ್ತವಾಂಶ ಮನವರಿಕೆ । ಸಚಿವ ಡಿ.ಸುಧಾಕರ್ ಬೆಂಗಳೂರಿನಲ್ಲಿ ನಡೆಸಿದ ಸಭೆಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ವಾಣಿವಿಲಾಸ ಸಾಗರ ಜಲಾಶಯದಿಂದ 13 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ 0.50 ಟಿಎಂಸಿ ನೀರು ಹಂಚಿಕೆ ಮಾಡುವ ಸಂಬಂಧ ಸಚಿವ ಡಿ.ಸುಧಾಕರ್ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಕರೆದ ಸಭೆ ಬೇಡಿಕೆಯ ಸ್ಪಷ್ಟವಾಗಿ ನಿರಾಕರಿಸಿದೆ.

ಮಾರಿಕಣಿವೆಯಲ್ಲಿ ನೀರಿಲ್ಲವೆಂಬ ವಾಸ್ತವಾಂಶ ಮನವರಿಕೆ ಮಾಡಿಕೊಡುವಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಖಾಲಿ ಚೊಂಬು ಇಟ್ಟುಕೊಂಡು ಲೋಟಕ್ಕೆ ನೀರು ಹಾಕೋದು ಹೇಗೆ ಎಂಬರ್ಥದ ಸಂದೇಶ ರವಾನಿಸಿ ಅರ್ಧ ಟಿಎಂಸಿ ನೀರಿನ ಬೇಡಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರ ಮೇಲ್ದಂಡೆ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ ಸೇರಿದಂತೆ ಯೋಜನೆಯ ಪ್ರಮುಖ ಎಂಜಿನಿಯರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವ ಡಿ.ಸುಧಾಕರ್, ಗಾಯತ್ರಿ ಜಲಾಶಯ ಸೇರಿ 13 ಕೆರೆಗಳಿಗೆ ಕನಿಷ್ಟ 0.50 ಟಿಎಂಸಿ ನೀರು ಬೇಕಾಗಿದೆ. ಭದ್ರಾ ಮೇಲ್ದಂಡೆಯಡಿ ಹಾಲಿ ವಿವಿ ಸಾಗರಕ್ಕೆ ಹಂಚಿಕೆಯಾದ ನೀರಿನಲ್ಲಿ ಚಳ್ಳಕೆರೆಗೆ 0.25 ಟಿಎಂಸಿ ನೀರು ನೀಡಲಾಗಿದೆ. ಉಳಿದ ನೀರಿನಲ್ಲಿ 0.50 ಟಿಎಸಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಅತ್ಯಂತ ಉತ್ಸಾಹದಲ್ಲಿ ಸಭೆ ಕರೆದಿದ್ದ ಸುಧಾಕರ್‌ಗೆ ನಿಗಮದ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ವಿವಿ ಸಾಗರ ಜಲಾಶಯ ಖಾಲಿಯಾಗಿದೆ. ಹಾಲಿ ಅಚ್ಚುಕಟ್ಟು ಪ್ರದೇಶದ ಬೇಡಿಕೆಗೆ ನೀರು ಕಡಿಮೆ ಆಗುತ್ತೆ ಅನ್ನುವ ಕಾರಣಕ್ಕೆ ಭದ್ರಾ ಮೇಲ್ದಂಡೆಯಡಿ 2 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ನೀರಿದ್ದರೆ ಕೊಡಲು ನಮ್ಮದೇನೂ ಅಭ್ಯಂತರ ಇಲ್ಲ. ನೀರೇ ಇಲ್ಲವೆಂದಾದಲ್ಲಿ ಎಲ್ಲಿಂದ ಕೊಡೋದು ಎಂದು ಹೇಳಿದ್ದಾರೆ.

1909 ರಿಂದ 2022 ರವರೆಗೆ ಲಭ್ಯವಿರುವ ಮಳೆ ಪ್ರಮಾಣ ದಾಖಲೆಗಳನ್ವಯ ವಾಣಿವಿಲಾಸ ಸಾಗರದ ಜಲಾನಯನ ಪ್ರದೇಶದಲ್ಲಿ ಶೇ.75ರಷ್ಟು ಅವಲಂಬನೆಯಲ್ಲಿ ವಾರ್ಷಿಕ 2.748 ಟಿಎಂಸಿ ನೀರಿನ ಲಭ್ಯತೆ ದಾಖಲಾಗಿದೆ.

ಕೆಡಬ್ಲ್ಯೂಡಿಟಿ ತೀರ್ಪಿನ ಅನುಸಾರ ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ವಯ ವಿವಿ ಸಾಗರ ಜಲಾಶಯಕ್ಕೆ 5.25 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಕೊರತೆ ನೀಗಿಸುವ ಸಂಬಂಧ ಭದ್ರ ಮೇಲ್ದಂಡೆಯಡಿ 2 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ ಎಂಬ ಸತ್ಯ ಸಂಗತಿಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಸಚಿವ ಡಿ.ಸುಧಾಕರ್ ಅವರಿಗೆ ಮನವರಿಕೆ ಮಾಡಿದ್ದಾರೆ.

ವಿವಿ ಸಾಗರದ ಹಾಲಿ ಅಚ್ಚು ಕಟ್ಟು ಪ್ರದೇಶಕ್ಕೆ ಆಗಿರುವ ಕೊರತೆ ನೀಗಿಸುವ ಸಂಬಂಧವೇ ಭದ್ರಾ ಮೇಲ್ದಂಡೆಯಡಿ ಎರಡು ಟಿಎಂಸಿ ನೀರು ಹರಿಸಲಾಗಿದೆ. ಇದನ್ನು ಹೆಚ್ಚುವರಿ ಎಂದು ಭಾವಿಸುವಂತಿಲ್ಲ. ನೀರೇ ಇಲ್ಲದ ಜಲಾಶಯದಿಂದ ಬೇರೆಡೆಗೆ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಲಿ ಜಲಾಶಯ ಭರ್ತಿಯಾಗಿರುವುದರಿಂದ ನೀರಿದೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ ನಂತರವೇ ಸುಧಾಕರ್ ಗಾಯತ್ರಿ ಜಲಾಶಯಕ್ಕೆ ನೀರೊಯ್ಯುವ ಆಸೆ ಕೈ ಬಿಟ್ಟಿದ್ದಾರೆ.