ಕನ್ನಡ ಲೋಕಕ್ಕೆ ಇಂಗ್ಲಿಷ್‌ ಸಾಹಿತ್ಯ ಪರಿಚಯಿಸಿದ ಶೇಷಗಿರಿರಾವ್

| Published : May 28 2024, 01:12 AM IST

ಕನ್ನಡ ಲೋಕಕ್ಕೆ ಇಂಗ್ಲಿಷ್‌ ಸಾಹಿತ್ಯ ಪರಿಚಯಿಸಿದ ಶೇಷಗಿರಿರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಶೇಷಗಿರಿರಾವ್‌ರು ಹತ್ತಾರು ಕನ್ನಡ ಚಳವಳಿಗಳನ್ನು ಬೆಂಗಳೂರು ನೆಲದಲ್ಲಿ ಕಟ್ಟಿದವರು. ಅಂದಿಗಿಂತ ಇಂದು ಕನ್ನಡ ಚಳವಳಿಗಳ ಅವಶ್ಯಕತೆ ಇದೆ. ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ನೇಮಕಾತಿ ಇಲ್ಲ. ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಇವುಗಳ ವಿರುದ್ಧ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ.

ಧಾರವಾಡ:

ಇಂಗ್ಲಿಷ್‌ ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದವರಲ್ಲಿ ಮೊದಲಿಗರಲ್ಲದೇ ಕನ್ನಡ ಸಾಹಿತ್ಯದಲ್ಲಿ ವಿಮರ್ಶಾ ಲೋಕಕ್ಕೆ ಮಾರ್ಗ ಹಾಕಿಕೊಟ್ಟವರು ಪ್ರೊ. ಎಲ್.ಎಸ್. ಶೇಷಗಿರಿರಾವ್ ಎಂದು ಹಿರಿಯ ಲೇಖಕ, ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಪ್ರೊ. ಎಲ್.ಎಸ್. ಶೇಷಗಿರಿರಾವ್ ಜನ್ಮಶತಮಾನೋತ್ಸವ ನಿಮಿತ್ತ ಆಯೋಜಿಸಿದ್ದ ‘ಎಲ್‌ಎಸ್‌ಎಸ್ ಅವರ ಬದುಕು-ಬರಹ’ ವಿಶೇಷ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.

ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯ ಬರೆದಿದ್ದಾರೆ. ಹದಿನೆಂಟು ಸಾವಿರಕ್ಕಿಂತ ಹೆಚ್ಚು ಪುಟಗಳನ್ನು ಸಂಪಾದನೆ ಮಾಡಿ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬರೆದವರು ಕನ್ನಡಿಗರಿಲ್ಲ. ನೂರಾರು ಕನ್ನಡ ಚಳವಳಿಗಳಲ್ಲಿ ಭಾಗವಹಿಸಿ ಕನ್ನಡ ಭಾಷೆಯ ಉಳಿವಿಗಾಗಿ ಜೀವ ಸವೆಸಿದವರು. ಶೇಷಗಿರಿಯವರದು ದೈತ್ಯ ಶಕ್ತಿ. ಸಾಹಿತಿಯಾಗಿ, ಚಳವಳಿಗಾರಗಾಗಿ, ಆಡಳಿತಗಾರರಾಗಿ, ಶಿಕ್ಷಕರಾಗಿ ಹೀಗೆ ಬಹುಮುಖವಾಗಿ ಜೀವನದುದ್ದಕ್ಕೂ ಕಾರ್ಯ ಮಾಡಿದರು. ಅವರು ವಿಶಿಷ್ಟ ವ್ಯಕ್ತಿತ್ವ ಯಾರಿಗೂ ಕೇಡು ಬಯಸದೇ ಕನ್ನಡ ನೆಲವನ್ನು ಶ್ರೀಮಂತಗೊಳಿಸಿದವರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಕಾರ್ಯ ಅವೀಸ್ಮರಣೀಯ ಎಂದರು.

ಶೇಷಗಿರಿರಾವ್‌ರ ಬದುಕು-ಬರಹ ಕುರಿತು ಮಾತನಾಡಿದ ಡಾ. ಜಿ.ಎಂ. ಹೆಗಡೆ, ಶೇಷಗಿರಿರಾವ್‌ರು ಹತ್ತಾರು ಕನ್ನಡ ಚಳವಳಿಗಳನ್ನು ಬೆಂಗಳೂರು ನೆಲದಲ್ಲಿ ಕಟ್ಟಿದವರು. ಅಂದಿಗಿಂತ ಇಂದು ಕನ್ನಡ ಚಳವಳಿಗಳ ಅವಶ್ಯಕತೆ ಇದೆ. ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ನೇಮಕಾತಿ ಇಲ್ಲ. ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಇವುಗಳ ವಿರುದ್ಧ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಎಲ್.ಎಸ್. ಮಕ್ಕಳ ಸಾಹಿತ್ಯ ಮೊದಲಗೊಂಡು ಎಲ್ಲ ಸಾಹಿತ್ಯ ಪ್ರಕಾರಗಳನ್ನು ನೀಡಿದರು. ಜ್ಞಾನ ಭಾರತಿ, ಕನ್ನಡ ಭಾರತಿ, ಕಿರಿಯರ ಕರ್ನಾಟಕ ಹೀಗೆ ಬೃಹತ್ ಗ್ರಂಥಗಳನ್ನು ನೀಡಿದಂತೆ ಇನ್ನೊಬ್ಬರು ನೀಡಿಲ್ಲ. ಶೇಷಗಿರಿರಾವ್ ನುಡಿದಂತೆ ಬದುಕಿದರು. ಬದುಕಿದಂತೇ ನುಡಿದರು. ನಿಘಂಟುಗಳ ತಜ್ಞರಾಗಿ ಕನ್ನಡ, ಇಂಗ್ಲಿಷ್‌ ನಿಘಂಟುಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿಯ ಗಳಗನಾಥ, ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ, ಹೊಸ ಸಾಹಿತ್ಯ ಹೊಸ ಭಾಷೆ ಬರಬೇಕೆಂದರೆ ಜೀವನ ವಿಕಸನಗೊಳ್ಳಬೇಕು. ಹೊಸ ಸಾಹಿತ್ಯದಲ್ಲಿ ನಿಸರ್ಗ ಮತ್ತು ಮನುಷ್ಯ ಸಂಬಂಧ ಬಂದಿತು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಭಾಷೆ ಗೌರವಯುತವಾಗಿ ಬಳಕೆಯಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಭಾಷೆ ಬಳಕೆಯ ರೀತಿ ತಲೆ ತಗ್ಗಿಸುವಂತೆ ಮಾತುಗಳನ್ನು ಕೇಳುತ್ತಿದ್ದೇವೆ ಎಂದ ನಾಡಗೌಡರು, ಶೇಷಗಿರಿರಾವ್‌ರನ್ನು ಸ್ಮರಿಸಿಕೊಳ್ಳುವುದೇ ಒಂದು ಭಾಗ್ಯ. ಏಕಕಾಲಕ್ಕೆ ಹಲವು ಪ್ರಕಾರಗಳ ಸಾಹಿತ್ಯ ರಚಿಸುತ್ತಿದ್ದ ಅವರ ಅಗಾಧ ಶಕ್ತಿ ಬೆರಗುಗೊಳಿಸುವಂತಹದ್ದು. ಈ ಕಾರ್ಯಕ್ರಮದಿಂದ ಶೇಷಗಿರಿರಾವ್ ಅವರ ಸಾಹಿತ್ಯ ಓದುವಂತೆ ಪ್ರೇರೇಪಿಸಿತು ಎಂದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಇದ್ದರು. ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.