ಸಾರಾಂಶ
ಪಣಜಿ: ಹುಬ್ಬಳ್ಳಿ-ಧಾರವಾಡ ನಗರ ಸೇರಿ ಉತ್ತರ ಕರ್ನಾಟಕದ ಹಲವು ಪಟ್ಟಣಗಳಿಗೆ ಕುಡಿವ ನೀರೊದಗಿಸುವ ಮಹತ್ವದ ಕಳಸಾ ಬಂಡೂರಿ ನಾಲಾ ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಕೊಲ್ಲಾಪುರ ತಾಲೂಕಿನ ನೆರಾಸೆ ಗ್ರಾಮದಲ್ಲಿ 28.44 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆ ತಿರುವು ಯೋಜನೆಗೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ತಡೆ ನೀಡಿದೆ. ಪ್ರಸ್ತಾಪಿತ ಯೋಜನೆಯು ಭೀಮಗಡ ರಕ್ಷಿತಾರಣ್ಯಕ್ಕೆ ಸಮೀಪದಲ್ಲಿ ಹಾದು ಹೋಗುವುದರಿಂದ ಈ ಕ್ರಮ ಕೈಗೊಂಡಿದೆ. ಜತೆಗೆ, ಪ್ರಸ್ತಾಪಿತ ನಾಲಾ ತಿರುವು ಯೋಜನಾ ಪ್ರದೇಶಕ್ಕೆ ಭೇಟಿ ನೀಡಲೂ ಆರ್‌ಇಸಿ ನಿರ್ಧರಿಸಿದೆ.
ಪ್ರಸ್ತಾಪಿತ ಯೋಜನೆಯು ಅಪಾಯದಂಚಿನಲ್ಲಿರುವ ಹುಲಿ, ಚಿರತೆ ಸೇರಿ ಇನ್ನಿತರ ಜೀವವೈವಿಧ್ಯಗಳ ಆವಾಸಸ್ಥಾನವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಜೀವವೈವಿಧ್ಯತೆ ರಕ್ಷಣೆ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸುವಂತೆಯೂ ನಿರ್ದೇಶನ ನೀಡಿದೆ. ಇದೇ ವೇಳೆ ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಕುರಿತು ವನ್ಯಜೀವಿ ಸಂರಕ್ಷಣಾಧಿಕಾರಿಯ ಅಭಿಪ್ರಾಯವನ್ನೂ ಕೇಳಿದೆ.
ಕರ್ನಾಟಕದ ವಾದವೇನು?:
ನೆರಸೆ ಗ್ರಾಮದಲ್ಲಿ ಕಿರು ಅಣೆಕಟ್ಟೆ, ಜಾಕ್‌ವೆಲ್, ಎಲೆಕ್ಟ್ರಿಕ್ ಸಬ್‌ಸ್ಟೇಷನ್, ಪೈಪ್‌ಲೈನ್ ಮತ್ತು ಪವರ್ ಲೈನ್‌ಗಾಗಿ 28.44 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಸಂಬಂಧ ಅನುಮತಿ ನೀಡುವಂತೆ ಕರ್ನಾಟಕದ ನೀರಾವರಿ ನಿಗಮ ಲಿ.(ಕೆಎನ್‌ಎನ್‌ಎಲ್) ಆರ್‌ಇಸಿಗೆ ಮನವಿ ಮಾಡಿತ್ತು. ಈ ನಾಲಾ ತಿರುವು ಯೋಜನಾ ಸ್ಥಳ ಭೀಮಗಡ ರಕ್ಷಿತಾರಣ್ಯದಿಂದ 0.029 ಕಿ.ಮೀ. ದೂರಲ್ಲಿದೆ ಮತ್ತು ನೋಟಿಫೈ ಮಾಡಲಾದ ಪರಿಸರ ಸೂಕ್ಷ್ಮ ಪ್ರದೇಶದಿಂದ ಹೊರಗಿದೆ ಎಂದು ಕರ್ನಾಟಕ ವಾದಿಸಿತ್ತು.
ನೀರು ಪಂಪ್ ಮಾಡುವ ಕಾರ್ಯ ಮಳೆಗಾಲದ ಅವಧಿ ಅಂದರೆ ಜೂನ್‌ನಿಂದ ನವೆಂಬರ್ ವರೆಗಷ್ಟೇ ನಡೆಯಲಿದೆ. ನವೆಂಬರ್ ನಂತರ ಅಲ್ಲಿ ಸಂಗ್ರಹಿಸಲಾದ ನೀರನ್ನು ಕಾಡುಪ್ರಾಣಿಗಳಿಗೆ ಬಿಡಲಾಗುವುದು. ಜತೆಗೆ ಈ ಕ್ರಮದಿಂದ ಈ ಪ್ರದೇಶದಲ್ಲಿ ಅಂತರ್ಜಲ ಕೂಡ ಹೆಚ್ಚಾಗಲಿದೆ. ಬೇಸಿಗೆ ಅವಧಿಯಲ್ಲಿ ನಾಲೆಗಳಿಂದ ಸೋರುವ ನೀರಿನಿಂದ ವನ್ಯಪ್ರಾಣಿಗಳಿಗೂ ಅನುಕೂಲವಾಗಲಿದೆ ಎಂದು ಕರ್ನಾಟಕ ವಾದಿಸಿತ್ತು.
ಅಲ್ಲದೆ, ಜೀವವೈವಿಧ್ಯದ ಮೇಲೂ ಯೋಜನೆಯಿಂದ ಕನಿಷ್ಠ ಪರಿಣಾಮ ಆಗಲಿದೆ. ಸಣ್ಣಪುಟ್ಟ ಸಮಸ್ಯೆಗಳಾದರೂ ಅದನ್ನು ಸೂಕ್ತ ವನ್ಯಜೀವಿ ಸಂರಕ್ಷಣಾ ಕ್ರಮಗಳ ಮೂಲಕ ಸರಿಪಡಿಸಲಾಗುವುದು. ಅಲ್ಲದೆ ಯೋಜನಾ ಮೊತ್ತದ ಶೇ.5ರಷ್ಟು ಹಣವನ್ನು ವನ್ಯಜೀವಿಗಳು ಹಾಗೂ ಸಂರಕ್ಷಣಾ ಕ್ರಮಗಳಿಗಾಗಿ ಬಳಸಲಾಗುವುದು ಎಂದು ತಿಳಿಸಿತ್ತು.