ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರ ಗ್ರಾಮೀಣ ಮಕ್ಕಳನ್ನು ಸೆಳೆಯಲು ಹಲವು ಉಚಿತ ಆಕರ್ಷಕ ಯೋಜನೆಗಳನ್ನು ರೂಪಿಸಿದ್ದರೂ ಸಹ ದಾಖಲಾತಿಯ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೇ ಕಾರಣ ಎನ್ನಲಾಗಿದೆ. ಹೌದು ಇಂದಿನ ಆಧುನಿಕ ಸಮಾಜದಲ್ಲಿಯೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಅನುಕೂಲಗಳಿಲ್ಲದಿದ್ದರೆ ಹೇಗೆ. ಸರ್ಕಾರ ಖಾಸಗಿ ಶಾಲೆಗಳಿಗಿಂತಲೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗಗಳ ಮಕ್ಕಳನ್ನು ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಶಾಲೆಗಳಲ್ಲಿ ಪ್ರವೇಶಾತಿ ಸಂಖ್ಯೆ ಹೆಚ್ಚಾಗುತ್ತಿಲ್ಲ.ಮಕ್ಕಳನ್ನು ಆಕರ್ಷಿಸಲು ಯೋಜನೆ
ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಜಾರಿ ಮಾಡಿದ್ದರೂ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಲು ಹಿಂದೇಟು ಹಾಕುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಟ್ಟಡವಿದ್ದರೆ ಶಿಕ್ಷಕರಿರುವುದಿಲ್ಲ, ಶಿಕ್ಷಕರಿದ್ದರೆ ಕಟ್ಟಡ ಶಿಥಿಲವಾಗಿರುತ್ತದೆ, ಬೋಧನಾ ಗುಣಮಟ್ಟ ಹೀಗೆ ಇಲ್ಲಗಳ ನಡುವೆ ತಮ್ಮ ಮಕ್ಕಳ ಭವಿಷ್ಯ ಹೇಗೆ ರೂಪಿಸುವುದು ಎಂಬ ಚಿಂತೆಯಿಂದ ಪೋಷಕರು ದುಬಾರಿಯಾದರೂ ಪರವಾಗಿಲ್ಲ ಸಕಲ ಸೌಲಭ್ಯಗಳಿರುವ ಖಾಸಗಿ ಶಾಲೆಗಳೆಲ್ಲೆ ಮಕ್ಕಳನ್ನು ಓದಿಸಲು ಮುಂದಾಗುತ್ತಿದ್ದಾರೆ. ಕ್ಷೇತ್ರದ 270 ಶಾಲೆಗೆ 138 ಶಿಕ್ಷಕರುಈಗ ಶೈಕ್ಷಣಿಕ ವರ್ಷ ಆರಂಭವಾಗಿದೆ, ಬಂಗಾರಪೇಟೆ ಕ್ಷೇತ್ರದಲ್ಲಿ ೨೦ ಸರ್ಕಾರಿ ಪೌಢಶಾಲೆಗಳಿವೆ, ೧೮೩ ಕಿರಿಯ, ೬೭ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ೧೩೮ ಶಿಕ್ಷಕರು ಪೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಗುಣಮಟ್ಟದ ಬೋಧನೆ ಮಾಡಲು ಕಾಯಂ ಶಿಕ್ಷಕರಿಲ್ಲದೆ ಅನೇಕ ಗ್ರಾಮೀಣ ಪ್ರದೇಶದ ಶಾಲೆಗಳು ಕಳೆಗುಂದಿವೆ. ೧೫ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ವರ್ಷದ ಆರಂಭದಲ್ಲೆ ವಿಘ್ನಗಳು ಎದುರಾಗಿವೆ. ೧೫೦ ಅತಿಥಿ ಶಿಕ್ಷಕರು ಅಗತ್ಯವಿದ್ದು ಶಿಕ್ಷಕರ ಕೊರತೆಯಿಂದ ಕೆಲವು ಕಡೆ ಪೋಷಕರು ಸರ್ಕಾರ ವಿರುದ್ದ ಪ್ರತಿಭಟನೆಗಳು ಶುರುವಾಗಿದೆ.ಸರ್ಕಾರ ಶಾಲೆಗಳ ಬಗ್ಗೆ ಮಾರುದ್ದ ಭಾಷಣ ಮಾಡುವ ಜನಪ್ರತಿನಿಧಿಗಳು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಿರುವುದರಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ. ಮಾದರಿ ಶಾಲೆಯ ಭರವಸೆ ಹುಸಿಯಾಗುತ್ತಿದೆ, ೫೦ ಮಕ್ಕಳಿಗೆ ಒಬ್ಬ ಶಿಕ್ಷಕ ಹೇಗೆ ಎಲ್ಲಾ ವಿಷಯವನ್ನು ಬೋಧಿಸುವುದು ಎಂಬುದು ಇರುವ ಶಿಕ್ಷಕರನ್ನು ಕಾಡುತ್ತಿರುವ ಪ್ರಶ್ನೆ. ಕಟ್ಟಡಗಳ ಸ್ಥಿತಿ ಚಿಂತಾಜನಕ
ತಾಲೂಕಿನ ಗಡಿ ಗ್ರಾಮಗಳಾದ ದೋಣಿಮಡಗು ಗ್ರಾಪಂನ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ, ಸುಣ್ಣ ಬಣ್ಣ ಕಂಡು ವರ್ಷಗಳೇ ಕಳೆದಿದೆ, ಕಟ್ಟಡವನ್ನು ನೋಡಿದರೆ ಇದು ಶಾಲೆಯೋ ಇಲ್ಲ ಪಾಳು ಬಿದ್ದಿರುವ ಕಟ್ಟಡವೋ ಎಂಬ ಅನುಮಾನ ಮೂಡುವಂತಿದೆ. ಮಳೆ ಬಂದರೆ ಛಾವಣಿಯಿಂದ ನೀರು ಸೋರುವುದು, ಬಿರುಕು ಬಿಟ್ಟಿರುವ ಗೋಡೆಗಳು ಮುರಿದು ಬೀಳುವ ಹಂತದಲ್ಲಿರುವ ಕಿಟಿಕಿಗಳು, ಶೌಚಾಲಯಕ್ಕಾಗಿ ಮಕ್ಕಳು ಬಯಲನ್ನು ಆಶ್ರಯಿಸುವಂತಾಗಿದೆ.ಪಟ್ಟಣದಲ್ಲೆ ಸರ್ಕಾರಿ ಶಾಲೆಗಳು ಸಮರ್ಪಕವಾಗಿಲ್ಲ. ತಾಲೂಕಿನ ದೇವರಗುಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೆ ದೇವಾಲಯದ ಆವರಂದಲ್ಲೆ ಮಕ್ಕಳು ಪಾಠ ಕೇಳುವಂತಾಗಿದೆ. ಕಣ್ಣ ಮುಂದೆ ಇಂತಹ ಅನೇಕ ಶಾಲೆಗಳಿದ್ದರೂ ಜನಪ್ರತಿನಿಧಿಗಳು ಬರೀ ಬಾಯಿ ಮಾತಿನಲ್ಲಿ ಸರ್ಕಾರಿ ಶಾಲೆಗಳನ್ನು ಹೊಗಳುವರು ವಿನಃಯಾವುದೇ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆಂದು ಪೋಷಕರು ದೂರಿದ್ದಾರೆ.ಇಂತಹ ಕಲುಷಿತ ವಾತಾವರಣದಲ್ಲಿ ಮಕ್ಕಳು ಹೇಗೆ ತಾನೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂಬುದು ಪೋಷಕರ ಪ್ರಶ್ನೆ.