ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೂ ಬೆಳೆಗಾರರಿಗೆ ಅತಿ ಹೆಚ್ಚು ಲಾಭ ತಂದುಕೊಡುವ ಬೆಳೆ ಎಂದೇ ಖ್ಯಾತಿ ಪಡೆದಿರುವ ಸೇವಂತಿಗೆ ಬೆಳೆಗೆ ನಾನಾ ರೋಗ ಮತ್ತು ಕೀಟ ಬಾಧೆ ಎದುರಾಗಿದೆ. ತೋಟಗಳಲ್ಲೇ ಸೇವಂತಿಗೆ ಗಿಡಗಳು ನೆಲಕಚ್ಚುತ್ತಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.ಸೇವಂತಿಗೆ ಹೂವಿಗೆ ಉತ್ತಮ ಬೆಲೆ ಸಿಗುತ್ತಿದೆ ಹಬ್ಬಗಳ ಸಮಯದಲ್ಲಿ ಪ್ರತಿ ಕೆ.ಜಿ. ಸೇವಂತಿಗೆ ಹೂವು 300ರಿಂದ 400 ರೂ.ವರೆಗೂ ಮಾರಾಟವಾಗುತ್ತಿದೆ. ಈ ವರ್ಷವೂ ಶ್ರಾವಣ ಮಾಸ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಒಳ್ಳೆಯ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಪ್ರದೇಶದಲ್ಲಿ ಸೇವಂತಿಗೆಯನ್ನು ನಾಟಿ ಮಾಡಿದ್ದರು. ಆದರೆ ಬದಲಾದ ವಾತಾವರಣದಿಂದ ಸೇವಂತಿಗೆ ಬೆಳೆ ನಾನಾ ರೋಗಗಳಿಗೆ ಮತ್ತು ಕೀಟ ಬಾಧೆಗೆ ತುತ್ತಾಗಿದೆ.
ಬಾಡುತ್ತಿರುವ ಗಿಡಗಳುಸೇವಂತಿಗೆ ಬೆಳೆಗೆ ಸೊರಗು ರೋಗ ಬಂದರೆ ಮೊದಲಿಗೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ ಗಿಡವು ಬಾಡಿ ಒಣಗುತ್ತದೆ. ರೋಗಪೀಡಿತ ಗಿಡಗಳನ್ನು ಸೀಳಿ ನೋಡಿದಾಗ ಕಾಂಡದ ಅಂಚಿನಲ್ಲಿ ಕಂದು ಬಣ್ಣದ ಮಚ್ಚೆಗಳು ಕಾಣುತ್ತವೆ. ಈ ರೋಗವು ಹೆಚ್ಚು ಮಣ್ಣಿನ ತೇವಾಂಶವಿರುವ ಕಡೆ ಹೆಚ್ಚಾಗಿ ಕಂಡುಬರುತ್ತಿದ್ದು, ಬಹುಬೇಗ ನೀರಿನ ಮೂಲಕ ಗಿಡದಿಂದ ಗಿಡಕ್ಕೆ ಹರಡುವುದರಿಂದ ಇಡೀ ತೋಟಗಳೇ ಹಾಳಾಗುತ್ತಿವೆ ಮತ್ತು ಫಿಪ್ಸ್ ಕೀಟ ಬಾದೆಯಿಂದಲೂ ಗಿಡಗಳು ಸಾಯುತ್ತಿವೆ.
ಸತತವಾಗಿ ಒಂದೇ ಕೀಟನಾಶಕವನ್ನು ಬಳಸಿದ್ದಲ್ಲಿ ಕೀಟದಲ್ಲಿ ಕೀಟನಾಶಕ ನಿರೋಧಕ ಶಕ್ತಿ ಹೆಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಮ್ಮೆ ಬಳಸಿದ ಕೀಟನಾಶಕವನ್ನು ಅದೇ ಬೆಳೆಯ ಮೇಲೆ ಮತ್ತೊಮ್ಮೆ ಬಳಸಬಾರದು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.ಔಷಧ ಸಿಂಪಡಿಸಿದರೂ ತಗ್ಗದ ರೋಗ
ಸೇವಂತಿ ನಾಟಿ ಮಾಡಿದ ದಿನದಿಂದ ಒಂದಿಲ್ಲೊಂದು ರೋಗ ಸೇವಂತಿಗೆ ಬೆಳೆಯನ್ನು ಕಾಡುತ್ತಿದೆ. ಎಷ್ಟೇ ಔಷಧಗಳನ್ನು ಸಿಂಪಡಿಸಿದರೂ ಗಿಡ ಸಾಯುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಒಳ್ಳೆಯ ಬೆಳೆ ಬರುತ್ತಿತ್ತು. ಆದರೆ ಈ ಬಾರಿ ಆರಂಭದಿಂದಲೇ ಸಮಸ್ಯೆ ತಲೆದೋರಿದ್ದು ಹೂವು ಬರುವ ನಿರೀಕ್ಷೆಯೂ ಇಲ್ಲವಾಗಿದೆ ಎನ್ನುತ್ತಾರೆ ಸೇವಂತಿಗೆ ಬೆಳೆಗಾರು.