ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬರದ ತೀವ್ರತೆ ದಿನೇ ದಿನೇ ಹೆಚ್ಚುತ್ತಿದ್ದು ಮುಂಗಾರು, ಹಿಂಗಾರು ಜೊತೆ ಈ ವರ್ಷ ಬೇಸಿಗೆ ಹಂಗಾಮು ಬಿತ್ತನೆಯೂ ಕುಂಠಿತಗೊಂಡಿದೆ.ಕಳೆದ ಬಾರಿ ಬೇಸಿಗೆ ಹಂಗಾಮಿನಲ್ಲಿ ಕೃಷಿ ಇಲಾಖೆ 18,903 ಹೆಕ್ಟೇರ್ ಬಿತ್ತನೆಯ ಗುರಿ ಹಾಕಿಕೊಂಡಿತ್ತು. ಆದರೆ, 22461 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬೆಳೆಯಲಾಗಿತ್ತು. ಗುರಿಗೂ ಮೀರಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.
ಈ ಬಾರಿ ಬೇಸಿಗೆ ಹಂಗಾಮಿನಲ್ಲಿ 20,568 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಂಡಿದ್ದು, ಕೇವಲ 8475 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಬಾರಿ ಮಳೆಯಿಲ್ಲದೆ ಮುಂಗಾರು, ಬೇಸಿಗೆ ಹಂಗಾಮಿನಲ್ಲೂ ಬಿತ್ತನೆ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಲ್ಲಿ 12,220 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಬೆಳೆ ಈಗ 4896 ಹೆಕ್ಟೇರ್‌ಗೆ ಕುಸಿದಿದೆ.ಶಿವಮೊಗ್ಗ ತಾಲೂಕು ಭಾಗದಲ್ಲಿ 3698 ಹೆಕ್ಟೇರ್ ಗುರಿ ಇದ್ದು, 3691 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಭದ್ರಾವತಿಯಲ್ಲಿ 4675 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 1094 ಹೆಕ್ಟೇರ್ ಬಿತ್ತನೆಯಾಗಿದೆ. ತೀರ್ಥಹಳ್ಳಿಯಲ್ಲಿ 10 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 10 ಹೆಕ್ಟೇರ್ ಬಿತ್ತನೆಯಾಗಿದೆ. ಸಾಗರದಲ್ಲಿ 470 ಹೆಕ್ಟೇರ್ ಗುರಿಹೊಂದಿದ್ದು, ಸಾಧನೆ ಮಾತ್ರ ಶೂನ್ಯವಾಗಿದೆ. ಇನ್ನು ಹೊಸನಗರದಲ್ಲೂ ಯಾವುದೇ ಬಿತ್ತನೆ ಆಗಿಲ್ಲ. ಶಿಕಾರಿಪುರದಲ್ಲಿ 540 ಹೆಕ್ಟೇರ್ ಗುರಿ ಹೊಂದಿದ್ದು 2175 ಹೆಕ್ಟೇರ್ ಸಾಧನೆ ಇದೆ. ಸೊರಬದಲ್ಲಿ 6375 ಹೆಕ್ಟೇರ್ ಗುರಿಯಲ್ಲಿ 1505 ಹೆಕ್ಟೇರ್‌ನಲ್ಲಿ ಬೆಳೆ ಬಿತ್ತನೆಯಾಗಿದೆ.
ಕಳೆದ ಬಾರಿ ಗುರಿಗೂ ಮೀರಿದ ಸಾಧನೆ:ಕಳೆದ ಬಾರಿ ಬೇಸಿಗೆ ಹಂಗಾಮಿನಲ್ಲಿ 18903 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 22461 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಈ ಬಾರಿ ಬೇಸಿಗೆ ದಿನಗಳು ಮುಂಗಾರು, ಹಿಂಗಾರು ಹಂಗಾಮುಗಳಿಗಿಂತ ಭೀಕರವಾಗಿದ್ದು ಬಹಳಷ್ಟು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಿದ್ದು, ಬಿತ್ತಿರುವ ಅಲ್ಪ, ಸ್ವಲ್ಪ ಬೆಳೆಯೂ ಮುರುಟಿ ಹೋಗುತ್ತಿದೆ.ಬೇಸಿಗೆ ಹಂಗಾಮಿನಲ್ಲಿ ಮೆಕ್ಕೆಜೋಳ ಒಂದಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಆಗಿದ್ದು 5983 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಗುರಿಯಲ್ಲಿ 8507 ಹೆಕ್ಟೇರ್ ಬಿತ್ತನೆ ಆಗಿದೆ. 120 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 45 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಅಲಸಂದೆ, ಹೆಸರು ಕಾಳು, ಶೇಂಗಾ ಒಂದಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿದೆ.
ಈ ಬಾರಿ ಕೇವಲ 4,896 ಹೆಕ್ಟೇರ್ ಭತ್ತದ ಬಿತ್ತನೆಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನ ಬಿತ್ತನೆಯಲ್ಲಿ ಬಹುಪಾಲು ನೀರಾವರಿ ಭತ್ತವೇ ಆಕ್ರಮಿಸಿಕೊಂಡಿರುತ್ತದೆ. ಒಟ್ಟು ಬಿತ್ತನೆಯಲ್ಲಿ 12,220 ಹೆಕ್ಟೇರ್ ಭತ್ತ ಬಿತ್ತನೆ ಗುರಿಯಿತ್ತು. ಪ್ರತಿ ವರ್ಷ ಗುರಿಗಿಂತ ಹೆಚ್ಚು ಬಿತ್ತನೆ ಆಗುತ್ತಿತ್ತು. ಆದರೆ, ಈ ವರ್ಷ ಕೇವಲ 4896 ಹೆಕ್ಟೇರ್ (ಶೇ. 41) ಮಾತ್ರ ಬಿತ್ತನೆ ಆಗಿದೆ.ಬರ ಹಿನ್ನೆಲೆ ಬೋರ್‌ವೆಲ್ ನೀರಿನ ವ್ಯವಸ್ಥೆ ಇರುವವರು ಮಾತ್ರ ಭತ್ತ ಬೆಳೆಯಲು ಮುಂದಾಗಿದ್ದಾರೆ. ಉಳಿದಂತೆ ನೀರಾವರಿ ಪ್ರದೇಶದಲ್ಲೆಲ್ಲೂ ಭತ್ತದ ಬೆಳೆ ಕಾಣುವುದಿಲ್ಲ, ಮಳೆಯಾಶ್ರಿತ ಎನ್ನುವುದು ಒತ್ತಟ್ಟಿಗಿರಲಿ ಭದ್ರ ಡ್ಯಾಂನಿಂದ ನಾಲೆಗೆ ನೀರು ಹರಿಸಿದ್ದರೂ ಅಚ್ಚುಕಟ್ಟು ಪ್ರದೇಶದಲ್ಲಿಯೇ ಕಟ್ಟಿರುವ ಅಡಕೆ, ತೆಂಗು ತೋಟಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಬೇಸಿಗೆ ಬಿತ್ತನೆ ಕನಸಿನ ಮಾತು ಎಂದು ರೈತರು ಹೇಳುತ್ತಿದ್ದಾರೆ.
----------