ಪುಸ್ತಕ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಅಶೋಕ್ ಹಾಸ್ಯಗಾರ

| Published : May 15 2024, 01:34 AM IST

ಸಾರಾಂಶ

ಒಂದು ವರದಿಯ ಪ್ರಕಾರ ದೇಶದಲ್ಲಿ ಲಕ್ಷಕ್ಕೂ ಅಧಿಕ ತಾಳೆಗರಿಯಲ್ಲಿ ಬರೆದ ಗ್ರಂಥಗಳಿವೆ. ಆದರೆ ಅವುಗಳಲ್ಲಿ ಶೇ. ೪೦ರಷ್ಟು ಮಾತ್ರ ಓದಲು ಸಾಧ್ಯವಾಗಿದೆ. ನಮ್ಮ ಪರಂಪರೆ, ಸಂಸ್ಕೃತಿ ನಮ್ಮ ಬೌದ್ಧಿಕ ಚಿಂತನೆಯನ್ನು ಗ್ರಹಿಸಲು ಪುಸ್ತಕ ನೆರವಾಗಿದೆ.

ಶಿರಸಿ: ಪುಸ್ತಕವು ಮಾನವನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಪ್ರಸಕ್ತ ಜೀವನದಲ್ಲಿ ಪುಸ್ತಕದ ಮಹತ್ವವನ್ನು ಸಮಾಜ ಅರಿತುಕೊಳ್ಳಬೇಕಾಗಿದೆ. ಪ್ರಸ್ತುತ ಜೀವನದಲ್ಲಿ ಪುಸ್ತಕ ಓದುವ ಅವಶ್ಯಕತೆ ಇಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ಪುಸ್ತಕ ಓದದೇ ಪ್ರಾಪಂಚಿಕ, ವ್ಯವಹಾರಿಕ ಯಾವುದೇ ರೀತಿಯಾದಂತಹ ಜ್ಞಾನಭಂಡಾರ ನಮಗೆ ಲಭಿಸುವುದಿಲ್ಲ ಎಂದು ಹಿರಿಯ ಪತ್ರಕರ್ತ ಅಶೋಕ್ ಹಾಸ್ಯಗಾರ ತಿಳಿಸಿದರು.

ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಹಿರಿಯ ಪತ್ರಕರ್ತ ಅರುಣ್ ಕುಮಾರ್ ಹಬ್ಬು ಬರೆದ ಮಹಿಳೆ ಮತ್ತು ಮಾಧ್ಯಮ ಒಂದು ಅವಲೋಕನ ಹಾಗೂ ಚಾಣಕ್ಯ ನೀತಿ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ವರದಿಯ ಪ್ರಕಾರ ದೇಶದಲ್ಲಿ ಲಕ್ಷಕ್ಕೂ ಅಧಿಕ ತಾಳೆಗರಿಯಲ್ಲಿ ಬರೆದ ಗ್ರಂಥಗಳಿವೆ. ಆದರೆ ಅವುಗಳಲ್ಲಿ ಶೇ. ೪೦ರಷ್ಟು ಮಾತ್ರ ಓದಲು ಸಾಧ್ಯವಾಗಿದೆ. ನಮ್ಮ ಪರಂಪರೆ, ಸಂಸ್ಕೃತಿ ನಮ್ಮ ಬೌದ್ಧಿಕ ಚಿಂತನೆಯನ್ನು ಗ್ರಹಿಸಲು ಪುಸ್ತಕ ನೆರವಾಗಿದೆ ಎಂದರು.

ಹಿರಿಯ ಪತ್ರಕರ್ತ ಹಾಗೂ ಗ್ರಂಥಕರ್ತೃ ಅರುಣ್ ಕುಮಾರ್ ಹಬ್ಬು ಮಾತನಾಡಿ, ಪತ್ರಿಕೆ ಎಂಬುದು ಜ್ಞಾನ ಭಂಡಾರವಿದ್ದಂತೆ. ಅದನ್ನು ಎಲ್ಲರೂ ಓದಬೇಕು. ಅದರ ಸಾರವನ್ನು ತಿಳಿದುಕೊಳ್ಳಬೇಕು. ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ. ಅದೊಂದು ವ್ಯವಸಾಯ ಎಂದು ಡಿವಿಜಿಯವರ ಕಗ್ಗವನ್ನು ಉದಾಹರಿಸಿದರು.

ಕಾಲೇಜಿನ ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಮಾತನಾಡಿ, ಯುವಕರಲ್ಲಿ ಪುಸ್ತಕಪ್ರೇಮ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಅವರ ಬೌದ್ಧಿಕ ಮತ್ತು ಮಾನಸಿಕ ಕ್ಷಮತೆ ವೃದ್ಧಿಸುತ್ತದೆ. ಆದ್ದರಿಂದ ಎಲ್ಲರೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದರು.

ಕವಿಯತ್ರಿ ಸಿಂಧೂಚಂದ್ರ ಹೆಗಡೆ ಮಹಿಳೆ ಮತ್ತು ಮಾಧ್ಯಮ ಒಂದು ಅವಲೋಕನ ಕೃತಿಯ ಪರಿಚಯ ಮಾಡಿ ಮಾತನಾಡಿ, ಮಹಿಳೆಯರ ಕುರಿತು ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಯಬೇಕಾದರೆ ಮೊದಲು ಪುಸ್ತಕ ಓದಬೇಕು. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮಾಧ್ಯಮಗಳು ಇದನ್ನು ಪ್ರಶ್ನಿಸಬೇಕಾಗಿದೆ. ಮಹಿಳಾ ಸಬಲೀಕರಣಕ್ಕೆ ಮಾಧ್ಯಮಗಳು ಸಹಕರಿಸಬೇಕು ಎಂದರು.

ಅಧ್ಯಾಪಕ ಮಹೇಶ್ ಭಟ್ ಚಾಣಕ್ಯ ನೀತಿ ಕೃತಿಯ ಪರಿಚಯ ಮಾಡಿ ಮಾತನಾಡಿ, ಇಂದು ಹಣ, ಕಾರು, ಆಸ್ತಿ ಎಲ್ಲವೂ ಇದೆ. ಆದರೆ ಮುಖ್ಯವಾಗಿ ಇರಬೇಕಾದಂತಹ ಆಸಕ್ತಿಯ ಕೊರತೆ ಉಂಟಾಗಿದೆ. ಕನ್ನಡ ಭಾಷೆಯಲ್ಲಿ ಚಾಣಕ್ಯ ನೀತಿ ಅತ್ಯಂತ ಉಪಕಾರಿಯಾದ ಕೃತಿಯಾಗಿದೆ. ಇಂತಹ ನೈತಿಕವಾದ ಗ್ರಂಥ ನಮ್ಮ ಭಾಷೆಯಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ಗ್ರಂಥಗಳನ್ನು ಓದುವುದರ ಮೂಲಕವಾಗಿ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಲು ಸಾಧ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಸ್ವಾಗತಿಸಿದರು. ವಿದ್ಯಾರ್ಥಿ ನಾಗರಾಜ್ ಶೇಟ್ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹೆಗಡೆ ವಂದಿಸಿದರು.