ಒಳಚರಂಡಿ ಅವ್ಯವಸ್ಥೆ: ದುರ್ನಾತಕ್ಕೆ ಬೇಸತ್ತ ಜನತೆ

| Published : Dec 23 2023, 01:45 AM IST

ಒಳಚರಂಡಿ ಅವ್ಯವಸ್ಥೆ: ದುರ್ನಾತಕ್ಕೆ ಬೇಸತ್ತ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಪುರಸಭೆ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿದರೂ ಒಬ್ಬರು ಮತ್ತೊಬ್ಬ ಮೇಲೆ ಹಾಕಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಹೊರತು ಸಮಸ್ಯೆ ಪರಿಹರಿಸುವ ಧಾವಂತದಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುವಂತಾಗಿದೆ. ಪುರಸಭೆಯವರು ಯುಜಿಸಿಯನ್ನು ಪುರಸಭೆಗೆ ಹಸ್ತಾಂತರ ಮಾಡಿಲ್ಲ ಎಂದರೆ, ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಒಳಚರಂಡಿ ಕಾಮಗಾರಿ ಮುಕ್ತಾಯಗೊಂಡು 4-5 ವರ್ಷವಾಗಿದೆ. ಈಗ ನಮ್ಮದು ಯಾವುದೇ ಜವಾಬ್ದಾರಿ ಇಲ್ಲ. ಪುರಸಭೆಯವರೇ ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಈ ವಿಷಯವಾಗಿ ಯಾರನ್ನು ಸಂಪರ್ಕಿಸಬೇಕು ಎಂಬುದು ಸಾರ್ವಜನಿಕರ ಪೀಕಲಾಟವಾಗಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದಲ್ಲಿ ಒಳಚರಂಡಿ ಯೋಜನೆ(ಯುಜಿಡಿ) ಕಾಮಗಾರಿ ಮುಕ್ತಾಯಗೊಂಡು ಸುಮಾರು ಐದಾರು ವರ್ಷಗಳು ಗತಿಸಿವೆ. ಆದರೆ, ಅವೈಜ್ಞಾನಿಕ ಕಾಮಗಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಪಟ್ಟಣದ ವಿದ್ಯಾನಗರ ಬಡಾವಣೆ, ಮುಖ್ಯಬಜಾರ ರಸ್ತೆ, ಮಹಾಂತೇಶ ನಗರ, ವಿಜಯಪುರ ಮುಖ್ಯ ರಸ್ತೆ, ಕಿಲ್ಲಾ ಗಲ್ಲಿ ಸೇರಿದಂತೆ ಹಲವರು ಬಡಾವಣೆಗಳಲ್ಲಿ ಒಂದು ತಿಂಗಳಿಂದ ಮಲೀನ ನೀರು ಹರಿಯುತ್ತಿದೆ. ಇದರಿಂದ ದುರ್ನಾತ ಹರಡಿಕೊಂಡಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿರುವುದು ಪಟ್ಟಣದ ನಿವಾಸಿಗಳು ಹಿಡಿಶಾಪ ಹಾಕುವಂತಾಗಿದೆ.

ಪೂರ್ಣಪ್ರಮಾಣದ ಕಾಮಗಾರಿ ಮುಗಿಯದ ಕಾರಣ ಪಟ್ಟಣದ ಹಲವಾರು ಕಡೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲಲ್ಲಿ ಮಡುಗಟ್ಟಿ ನಿಂತಿದೆ. ಚರಂಡಿ ನೀರಿನ ದುರ್ನಾತ ಸಾರ್ವಜನಿಕರಿಗೆ ನರಕಯಾತನೆ ಅನುಭವಿಸುವಂತೆ ಮಾಡಿದೆ. ಸೊಳ್ಳೆಗಳ ಕಾಟ ಅಧಿಕವಾಗಿದ್ದು, ಕಲುಷಿತ ವಾತಾವರಣದಿಂದ ಸಾರ್ವಜನಿಕರು ಡೇಂಘಿ, ಮಲೇರಿಯಾದಂತಹ ರೋಗಗಳು ಬಾಧಿಸುವ ಆತಂದಲ್ಲಿದ್ದಾರೆ.

ಸಾರ್ವಜನಿಕರು ಪುರಸಭೆ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿದರೂ ಒಬ್ಬರು ಮತ್ತೊಬ್ಬ ಮೇಲೆ ಹಾಕಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಹೊರತು ಸಮಸ್ಯೆ ಪರಿಹರಿಸುವ ಧಾವಂತದಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುವಂತಾಗಿದೆ. ಪುರಸಭೆಯವರು ಯುಜಿಸಿಯನ್ನು ಪುರಸಭೆಗೆ ಹಸ್ತಾಂತರ ಮಾಡಿಲ್ಲ ಎಂದರೆ, ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಒಳಚರಂಡಿ ಕಾಮಗಾರಿ ಮುಕ್ತಾಯಗೊಂಡು 4-5 ವರ್ಷವಾಗಿದೆ. ಈಗ ನಮ್ಮದು ಯಾವುದೇ ಜವಾಬ್ದಾರಿ ಇಲ್ಲ. ಪುರಸಭೆಯವರೇ ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಈ ವಿಷಯವಾಗಿ ಯಾರನ್ನು ಸಂಪರ್ಕಿಸಬೇಕು ಎಂಬುದು ಸಾರ್ವಜನಿಕರ ಪೀಕಲಾಟವಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಮಲೀನ ಮುಕ್ತ ಪಟ್ಟಣ ಮಾಡುವ ಉದ್ದೇಶದಿಂದ ಸರ್ಕಾರ ಒಳಚರಂಡಿ ನಿರ್ಮಿಸಿದೆ. ಆದರೆ, ಯಾವಾಗ ಕಾಮಗಾರಿ ಶುರು ಮಾಡಿದರೋ ಆವಾಗಿನಿಂದ ಪಟ್ಟಣದ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಯಾವಾಗ ಈ ಸಮಸ್ಯೆಯಿಂದ ಮುಕ್ತಿ ಸಿಗುವುದೋ ಎಂದು ಹಿಡಿಶಾಪ ಹಾಕುವಂತಾಗಿದೆ.---ಕೋಟ್----

ಈ ಬಗ್ಗೆ ಪುರಸಭೆ ಸದಸ್ಯರು ಸೇರಿ ಆಯಾ ಬಡಾವಣೆಯ ಸಾರ್ವಜನಿಕರೂ ಸಾಕಷ್ಟು ಬಾರಿ ಸಂಬಂದಪಟ್ಟ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಜಿಲ್ಲಾಡಳಿತ ಈ ಸಮಸ್ಯೆಗೆ ಪರಿಹಾರ ಒದಸದೇ ಮೌನವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಪುರಸಭೆ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿ ತಕ್ಷಣದಲ್ಲಿಯೇ ಒಳಚರಂಡಿಯಿಂದ ಆಗುವ ಅವಾಂತರಗಳನ್ನು ಮಲೀನ ನೀರು ರಸ್ತೆ ಮೇಲೆ ಹರಿಯದಂತೆ ಮಲೀನ ಮುಕ್ತ ವಾತವರಣ ನಿರ್ಮಿಸುವ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಾಡಬೇಕಿದೆ.

---

ಪಟ್ಟಣದಲ್ಲಿ ಈಗಾಗಲೇ ಒಳಚರಂಡಿ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯಗೊಂಡಿದೆ. ಪ್ರತಿಯೊಬ್ಬರ ಮನೆ ಮನೆಗೆ ಒಳಚರಂಡಿ ಸಂಪರ್ಕ ಮಾಡುವುದು, ಛೇಂಬರ್‌ಗಳು ತುಂಬಿಕೊಂಡು ನೀರು ಹರಿಯದಂತೆ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಸೇರಿದೆ. ಒಂದು ವೇಳೆ ಪುರಸಭೆ ಅಧಿಕಾರಿಗಳಿಗೆ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರೆ ಒಳಚರಂಡಿ ಮಂಡಳಿಗೆ ನಿರ್ವಹಣೆ ವೆಚ್ಚ ಕೊಟ್ಟರೆ ನಾವೇ ಟೆಂಡರ್‌ ನಿರ್ವಹಣೆ ಮಾಡುತ್ತೇವೆ.

-ಎಸ್.ಎಸ್. ಪಟ್ಟಣಶೆಟ್ಟಿ, ಕಾರ್ಯಪಾಲಕ ಅಭಿಯಂತ ಒಳಚರಂಡಿ ಮಂಡಳಿ ವಿಜಯಪುರ

--------------

ಪಟ್ಟಣದಲ್ಲಿ ಒಳಚರಂಡಿ ಛೇಬರ್ ಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿರುವುದಲ್ಲದೇ ಮಲೀನ ವಾತಾವರಣ ನಿರ್ಮಾಣವಾಗಲು ಒಳಚರಂಡಿ ಮಂಡಳಿಯವರ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಮಂಡಳಿಯ ಎಂಡಿಗೂ ದೂರು ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೋ ಏನು ಗೊತ್ತಿಲ್ಲ. ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಸಾರ್ವಜನಿಕರು ತೀವ್ರ ಹೋರಾಟ ಮಾಡಬೇಕಾಗುತ್ತದೆ. ಆದಷ್ಟು ಬೇಗ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಪಟ್ಟಣದ ಒಳಚರಂಡಿ ಸಮಸ್ಯೆ ಬಗೆಹರಿಸಬೇಕು.

-ವಿರೇಶ ಹಡ್ಲಗೇರಿ ಪುರಸಭೆ ಸದಸ್ಯ ಮುದ್ದೇಬಿಹಾಳ

----

ಪಟ್ಟಣದಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಮುಕ್ತಾಯವಾಗಿಯೋ, ಇಲ್ಲವೋ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ಕಾಮಗಾರಿ ಮುಕ್ತಾಯಗೊಳಿಸಿ ಕಾಮಗಾರಿಯ ನೀಲನಕ್ಷೆಯನ್ನು ಪುರಸಭೆಗೆ ಹಸ್ತಾಂತರಿಸಿಲ್ಲ. ಹೀಗಾಗಿ ಸ್ವಚ್ಛತೆ ಅಥವಾ ನಿರ್ವಹಣೆ ಮಾಡಲು ಆಗುತ್ತಿಲ್ಲ. ಆದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಇದನ್ನು ಒಳಚರಂಡಿ ಮಂಡಳಿಯೇ ನಿರ್ವಹಣೆ ಮಾಡಬೇಕು. ಇದು ನಮ್ಮ ಜವಾಬ್ದಾರಿಯಲ್ಲ.

-ಮಲ್ಲನಗೌಡ ಬಿರಾದಾರ ಮುಖ್ಯಾಧಿಕಾರಿ ಪುರಸಭೆ ಮುದ್ದೇಬಿಹಾಳ