ಅಂಗನವಾಡಿ ಶಿಕ್ಷಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

| Published : Aug 09 2025, 12:02 AM IST

ಅಂಗನವಾಡಿ ಶಿಕ್ಷಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವುದರ ಬಗ್ಗೆ ನಮ್ಮಲ್ಲಿ ದಾಖಲೆಗಳು ಇವೆ.

ದಾಂಡೇಲಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯೊಬ್ಬರಿಗೆ ಮಾನಸಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ನಗರಸಭಾ ಸದಸ್ಯ ದಶರಥ ಬಂಡಿವಡ್ಡರ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಜಿಲ್ಲಾಧ್ಯಕ್ಷ ರೇಣುಕಾ ಬಂದಂ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಅಂಗನವಾಡಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವುದರ ಬಗ್ಗೆ ನಮ್ಮಲ್ಲಿ ದಾಖಲೆಗಳು ಇವೆ. ಇದರ ಆಧಾರದಲ್ಲಿ ನಾವು ಎಫ್ಐಆರ್ ದಾಖಲಿಸಿದ್ದೇವೆ. ಯಾವುದೇ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಅಥವಾ ಮಾನಸಿಕ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದರೆ ಅಂತಹವರ ವಿರುದ್ಧ ಮಾನವ ಹಕ್ಕುಗಳ ಭಾರತ ಪರಿಷತ್ ಸದಾ ಕಾರ್ಯ ನಿರ್ವಹಿಸಲಿದೆ ಎಂದಿದ್ದಾರೆ.

ಇದೇ ಅಂಗನವಾಡಿ ಶಿಕ್ಷಕಿ ಒಂದು ವರ್ಷದ ಹಿಂದೆ ಅಂಗನವಾಡಿಯ ಮಕ್ಕಳಿಗೆ ಪೊರೈಸಲಾಗುತ್ತಿದ್ದ ಆಹಾರ ವಸ್ತುಗಳನ್ನು ಕದ್ದು ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆಗ ಇದೇ ನಗರಸಭಾ ಸದಸ್ಯ ಹೆಣ್ಣೆಂಬ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯನ್ನು ರಕ್ಷಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು ಎಂದು ಪತ್ರಕರ್ತರು ಹೇಳಿದಾಗ, ಅಂದಿನಿಂದ ನಗರಸಭಾ ಸದಸ್ಯನ ಲೈಂಗಿಕ ಕಿರುಕುಳ ಹೆಚ್ಚಾಯಿತು ಎಂದು ರೇಣುಕಾ ಬಂದಂ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಸೀನಾ ಮಕಾಂದಾರ, ಮುಜಿಬಾ ಛಬ್ಬಿ, ಜಯಾ ನಾಯ್ಕ, ಸುಚಿತಾ ದೇವದಾಸ್, ದೀಪಾ ಅಚ್ಚಲಕರ್, ರೂಪಾ ಹೊಸೂರ, ಶಹಜಾದಿ ಕುಲ್ಸಾಪುರ ಉಪಸ್ಥಿತರಿದ್ದರು.