ಕಠಿಣ 4 ಕ್ಷೇತ್ರಗಳಲ್ಲಿ ಭಿನ್ನಮತ ಬಿಡಿ: ಶಾ

| Published : Apr 03 2024, 01:34 AM IST / Updated: Apr 03 2024, 06:48 AM IST

ಸಾರಾಂಶ

ಕಠಿಣ ಎನ್ನುವಂಥ ನಾಲ್ಕು ಲೋಕಸಭಾ ಕ್ಷೇತ್ರಗಳ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದನ್ನಾಗಿ ಮಾಡಬೇಡಿ ಎಂದು ಖಡಕ್ಕಾಗಿ ಸೂಚನೆ ನೀಡಿದ್ದಾರೆ.

 ಬೆಂಗಳೂರು : ಕಠಿಣ ಎನ್ನುವಂಥ ನಾಲ್ಕು ಲೋಕಸಭಾ ಕ್ಷೇತ್ರಗಳ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದನ್ನಾಗಿ ಮಾಡಬೇಡಿ ಎಂದು ಖಡಕ್ಕಾಗಿ ಸೂಚನೆ ನೀಡಿದ್ದಾರೆ.

ಈಗ ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವುದಕ್ಕೆ ಪೂರಕವಾಗಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು. ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಗುರಿಯಿಂದ ವಿಚಲಿತರಾಗಬೇಡಿ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮಂಗಳವಾರ ಮಧ್ಯಾಹ್ನ ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ವಿಸ್ತೃತ ಮಾಹಿತಿ ಪಡೆದರು.ಸಹಜವಾಗಿಯೇ ಅಸಮಾಧಾನಿತ ಮುಖಂಡರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆಯಲ್ಲಿ ಆಗಿರುವ ಬೆ‍ಳವಣಿಗೆ, ಇತರರ ಕಡೆಗಣನೆ ಮತ್ತಿತರ ವಿಷಯಗಳನ್ನು ಅಮಿತ್ ಶಾ ಅವರ ಮುಂದಿಡುವ ಪ್ರಯತ್ನ ಮಾಡಿದರು. ದಾವಣಗೆರೆಗೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಗಾಲಿ ಕರುಣಾಕರರೆಡ್ಡಿ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ತಮ್ಮ ದೂರುಗಳನ್ನು ಹೇಳುವ ಪ್ರಯತ್ನ ಮಾಡಿದರು.

ಆದರೆ ದೂರುಗಳ ಬಗ್ಗೆ ಹೆಚ್ಚು ಆಸಕ್ತಿ ತೋರದ ಅಮಿತ್ ಶಾ ಅವರು, ಸದ್ಯಕ್ಕೆ ಏನೇ ಭಿನ್ನಾಭಿಪ್ರಾಯ ಅಥವಾ ಬಿಕ್ಕಟ್ಟು ಇದ್ದರೂ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಸಬೇಕು. ಚುನಾವಣೆ ಬಳಿಕ ನಿಮ್ಮ ದೂರುಗಳ ಬಗ್ಗೆ ಚರ್ಚಿಸಿ ಬಗೆಹರಿಸೋಣ ಎಂದು ಹೇಳಿದರು ಎನ್ನಲಾಗಿದೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಮತ್ತಿತರರು ಪಾಲ್ಗೊಂಡಿದ್ದರು.

ಎಚ್‌ಡಿಕೆ ಆರೋಗ್ಯ ವಿಚಾರಿಸಿದ ಅಮಿತ್‌ ಶಾ

ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.

ಮಂಗಳವಾರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ ಅಮಿತ್‌ ಶಾ ಅವರನ್ನು ಎಚ್‌.ಡಿ.ಕುಮಾರಸ್ವಾಮಿ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಈ ವೇಳೆ ಕುಮಾರಸ್ವಾಮಿ ಅವರನ್ನು ನೋಡುತ್ತಿದ್ದಂತೆ ಅವರ ಆರೋಗ್ಯ ವಿಚಾರಿಸಿದ ಅಮಿತ್‌ ಶಾ, ‘ಹೌ ಆರ್ ಯು ಕುಮಾರಸ್ವಾಮಿ’ ಎಂದು ಹಸ್ತಲಾಘವ ಮಾಡಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಆರೋಗ್ಯ ಚೆನ್ನಾಗಿದೆ, ಫೈನ್‌ ಎಂದರು.

ಚನ್ನಪಟ್ಟಣದಲ್ಲಿ ಶಾ ಭರ್ಜರಿ ರೋಡ್ ಶೋ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೊಂಬೆನಾಡು ಚನ್ನಪಟ್ಟಣದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಮಂಗಳವಾರ ಸಂಜೆ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಬೇಟೆ ನಡೆಸಿದರು.ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಶಾ ತೆರೆದ ವಾಹನದಲ್ಲಿ ೧ ಕಿಮೀ ರೋಡ್ ಶೋ ನಡೆಸಿ ಮತದಾರರನ್ನು ಸೆಳೆದರು.

ಇದಕ್ಕೂ ಮೊದಲು ಬೆಂಗಳೂರಿನಿಂದ ಸಂಜೆ ೫.೪೫ರ ವೇಳೆಗೆ ಶೆಟ್ಟಿಹಳ್ಳಿ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಶಾ ಅವರು ೬.೪೫ಕ್ಕೆ ಮಂಗಳವಾರಪೇಟೆಯ ಬಸವನಗುಡಿ ಬಳಿಗೆ ಆಗಮಿಸಿ ತೆರೆದ ವಾಹನ ಏರಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತ ನೀಡಿದರು.ಭರ್ಜರಿ ರೋಡ್ ಶೋ: ಬಸವನಗುಡಿಯಿಂದ ಆರಂಭಗೊಂಡ ರೋಡ್ ಶೋ, ಗಾಂಧಿ ಭವನದ ವೃತ್ತದ ಬಳಿ ನಿರ್ಮಿತವಾಗಿದ್ದ ವೇದಿಕೆವರೆಗೆ ಸಾಗಿತು. ಮಾರ್ಗಮಧ್ಯೆ ಅಮಿತ್ ಶಾ ಅವರ ಮೇಲೆ ಜನ ಹೂ ಮಳೆ ಸುರಿಸಿದರೆ, ಶಾ ಜನರತ್ತ ಕೈಬೀಸಿ ನಗೆ ಬೀರಿದರು.

ಈ ವೇಳೆ ಎಲ್ಲೆಡೆಯೂ ‘ಮೋದಿ , ಮೋದಿ’ ಎಂಬ ಘೋಷ ಮಾರ್ಧನಿಸಿತು. ‘ಜೈ ಶ್ರೀರಾಮ್’ , ‘ಜೈ ಭಜರಂಗಬಲಿ’, ‘ವಂದೇ ಮಾತರಂ’, ‘ಭಾರತ್ ಮಾತಾಕೀ ಜೈ’, ‘ಜಿಂದಾಬಾದ್ ಜಿಂದಾ ಬಾದ್ ಹಿಂದೂಸ್ತಾನ್ ಜಿಂದಾಬಾದ್’ ... ಎಂಬ ಘೋಷಣೆಗಳು ದಾರಿಯುದ್ದಕ್ಕೂ ಕೇಳಿದವು.ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ಎ.ಮಂಜುನಾಥ್ , ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮತ್ತಿತರರು ಕೂಡ ಈ ವೇಳೆ ಭಾಗವಹಿಸಿದ್ದರು.

೪೫ ನಿಮಿಷದ ರೋಡ್ ಶೋಚನ್ನಪಟ್ಟಣದ ಮಂಗಳವಾರಪೇಟೆಯ ಬಸವಗುಡಿಯ ಬಳಿ ಸಂಜೆ ೬.೪೫ಕ್ಕೆ ಬಹಿರಂಗ ಪ್ರಚಾರದ ವಾಹನವೇರಿದ ಅಮಿತ್ ಶಾ, ೪೫ ನಿಮಿಷ ರೋಡ್ ಶೋ ನಡೆಸಿದರು. ಬಸವನಗುಡಿ ಮುಂಭಾಗದಿಂದ ಚನ್ನಪಟ್ಟಣ ಪೊಲೀಸ್ ಠಾಣೆ ಮುಂಭಾಗದ ವರೆಗೆ ನಡೆದ ಈ ರೋಡ್‌ ಶೋ ನಡೆಸಿದ ಶಾ ನಂತರ ಜನರನ್ನುದ್ದೇಶಿಸಿ ಮಾತನಾಡಿದರು.

ಮೊದಲ ಬಾರಿಗೆ ಪ್ರಚಾರದ ವಾಹನ ಬಳಕೆ

ಚನ್ನಪಟ್ಟಣ: ಈ ಬಾರಿಯ ಲೋಕಸಭೆ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಿಜೆಪಿ ಸಿದ್ಧಪಡಿಸಿದ ನೂತನ ಪ್ರಚಾರ ವಾಹನಕ್ಕೆ ಅಮಿತ್ ಶಾ ಚಾಲನೆ ನೀಡಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಳ್ಳಲು ರಾಜ್ಯ ಬಿಜೆಪಿ ೪ ವಾಹನಗಳನ್ನು ಸಿದ್ಧಪಡಿಸಿದ್ದು, ಚನ್ನಪಟ್ಟಣದಲ್ಲಿ ಹೊಸ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸುವ ಮೂಲಕ ಶಾ ರಾಜ್ಯದಲ್ಲಿ ಆ ವಾಹನದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಪ್ರಚಾರಕ್ಕೆ ಸಿದ್ಧಪಡಿಸಿದ್ದ ವಾಹನ ಚನ್ನಪಟ್ಟಣಕ್ಕೆ ಸೋಮವಾರ ರಾತ್ರಿಯೇ ಆಗಮಿಸಿತ್ತು.

ಸುಸಜ್ಜಿತ ಬಸ್: ಬಿಜೆಪಿ ಪ್ರಚಾರಕ್ಕೆ ಸಿದ್ಧಪಡಿಸಿರುವ ವಾಹನ ಸಂಪೂರ್ಣ ಸುಸಜ್ಜಿತ ವಾಹನವಾಗಿದ್ದು, ವಾಹನದ ಮೇಲ್ಭಾಗದಲ್ಲಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಸ್ಲೋಗನ್ನಿನ ಜೊತೆಗೆ, ‘ಈ ಬಾರಿ ೪೦೦ ಮೀರಿ’ ಎಂಬ ಘೋಷ ವಾಕ್ಯವಿದೆ. ಇದರ ಜತೆಗೆ ಬಿಜೆಪಿಯ ಕಮಲ ಹಾಗೂ ಜೆಡಿಎಸ್‌ನ ತೆನೆಹೊತ್ತ ಮಹಿಳೆಯ ಚಿಹ್ನೆ ಚಿತ್ರಿಸಲಾಗಿದೆ. ಬಸ್‌ನ ಒಳಭಾಗದಲ್ಲಿ ವಿರಮಿಸಲು ಸುಖಾಸೀನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಆರಾಮಾಗಿ ಪ್ರಚಾರ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ.