ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಸರ್ಕಾರದ ನಿಲುವನ್ನು ವಿರೋಧಿಸಿ, ಆದೇಶವನ್ನು ಹಿಂಪಡೆಯುಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ನಡೆಯುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಮುಖಂಡರಾದ ಮಹಾನಂದ, ಕಿಶೋರಿಯರ ಗರ್ಭಿಣಿ ಬಾಣಂತಿಯರ ಹಾಗೂ ಮಕ್ಕಳ ಆರೈಕೆ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾ, ಸುಮಾರು 45 ವರ್ಷಗಳಿಂದ ನಮ್ಮ ಜೀವನ ಮುಡುಪಾಗಿಟ್ಟಿದ್ದೇವೆ. ಚಿಕ್ಕ ಮಕ್ಕಳ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತರ ಕೊಡುಗೆ ಅಪಾರವಿದೆ. ಆದರೂ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 1008 ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿ ತೆರೆಯಲು ಮುಂದಾಗಿ ಅಂಗನವಾಡಿ ಕಾರ್ಯಕರ್ತೆಯರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಖಜಾಂಚಿ ಬಸಮ್ಮ ಸುರಪುರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು 40% ಪಿಯುಸಿ, ಬಿಎ ಮತ್ತು ಎಂಎ ಪದವಿಗಳನ್ನೊಂದಿದ್ದಾರೆ. ತಾಯಿ ಮನಸ್ಸಿನ ಅನುಭವವಿದೆ. ಅವರು ಮಕ್ಕಳೊಂದಿಗೆ ಒಡನಾಟ ಮಾಡುವುದನ್ನು ಹೊಸದಾಗಿ ಬರುವವರಿಗೂ ಅದರ ಅನುಭವ ಇದೆಯೇ ಎಂದು ಪ್ರಶ್ನಿಸಿದರು.ಅಂಗನವಾಡಿ ಹಿರಿಯ ಕಾರ್ಯಕರ್ತೆ ಸಂಪತ್ ಕುಮಾರಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬರುವ 3 ರಿಂದ 6 ವರ್ಷದ ಮಕ್ಕಳಲ್ಲಿ 4 ರಿಂದ 6 ವರ್ಷದ ಮಕ್ಕಳು ಶಾಲೆಗಳಿಗೆ ಬಂದರೆ, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು? ಕ್ರಮೇಣ ಅಂಗನವಾಡಿ ಕೇಂದ್ರಗಳು ಮುಚ್ಚಿ ಹಾಕುವ ಕುತಂತ್ರ ನಡೆಸಿದೆ. ಕೆಕೆಆರ್‌ಡಿಬಿಯಡಿ ಎಲ್‌ಕೆಜಿ ಪ್ರಾರಂಭಿಸುವ ಆದೇಶವನ್ನು ರದ್ದುಗೊಳಿಸಬೇಕು. 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ್, ಜಿಲ್ಲಾಧ್ಯಕ್ಷೆ ಅನಿತಾ ಹಿರೇಮಠ್, ಜಿಲ್ಲಾ ಮುಖಂಡರಾದ ನಸೀಮಾ ಸುರಪುರ, ಯಮನಮ್ಮ ದೋರನಹಳ್ಳಿ, ರಾಧಾ, ರೇಣುಕಾ ಗೋಗಿ, ಲಕ್ಷ್ಮೀ ಶಹಾಪುರ, ಮಹಾದೇವಿ ಕಾಡಮಗೇರ, ಮಹಾನಂದಾ, ಅನ್ನಪೂರ್ಣ, ಮಂಜುಳಾ, ಲಕ್ಷ್ಮಿ ಗೋಗಿ, ಶಾರದಾ ನಂದಿಹಳ್ಳಿ, ಅನಸೂಯ ಮದ್ರಿಕಿ, ರಾಜೇಶ್ವರಿ, ಬಸಲಿಂಗಮ್ಮ, ಈರಮ್ಮ, ಕಮಲ, ಚನ್ನಬಸಮ್ಮ, ಶನಾಜ್ ಬೇಗಂ, ಸುಶೀಲಾ, ವಿಜಯಲಕ್ಷ್ಮಿ, ರಾಜಲಕ್ಷ್ಮಿ, ಮರಲಿಂಗಮ್ಮ, ಶ್ರೀದೇವಿ ಸರಸ್ವತಿ ಇತರರಿದ್ದರು.-
ಕಲ್ಯಾಣ ಕರ್ನಾಟಕ ಭಾಗದಿಂದ ಪ್ರತಿನಿಧಿಸಿದ ಶಾಸಕರು ಸಚಿವರು ಅಂಗನವಾಡಿ ನೌಕರರ ಪರವಾಗಿದ್ದೇವೆ. ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮತ್ತು ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.- ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.