ಸಾರಾಂಶ
ಶ್ರೀರಂಗಪಟ್ಟಣದ ಪಶ್ಚಿಮವಾನಿಯ ಬಳಿಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಈಡುಗಾಯಿ ಹೊಡೆದು ಭಕ್ತರು ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ಪಟ್ಟಣದ ಪಶ್ಚಿಮವಾನಿಯ ಬಳಿಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಈಡುಗಾಯಿ ಹೊಡೆದು ಭಕ್ತರು ಪೂಜೆ ಸಲ್ಲಿಸಿದರು.
ರಾತ್ರಿಯಿಡಿ ಗ್ರಾಮದ ಪೇಟೆ ಬೀದಿ, ಕರಿಮಂಠಿ ಬೀದಿ, ಹಳ್ಳದಕೇರಿ, ಕುಂಬಾರಗೇರಿ, ಕ್ರಿಶ್ಚಿಯನ್ ಬೀದಿ, ಕಳ್ಳಿಕೊಪ್ಪಲು ಬೀದಿಗಳಲ್ಲಿ ಉತ್ಸವ ಮೆರವಣಿಗೆ ಜರುಗಿತು. ಉತ್ಸವ ನಡೆದ ದಾರಿಯುದ್ದಕ್ಕೂ ಭಕ್ತರು ಹಣ್ಣು, ಕಾಯಿ ಒಡೆದು, ಆರತಿ ಎತ್ತಿ ಪೂಜೆ ಸಲ್ಲಿಸಿದರು. ಮುಂಜಾನೆ ದೇವಾಲಯಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಉತ್ಸವಕ್ಕೆ ಅರ್ಚಕ ನಾರಾಯಣ ಅಗ್ರ ಪೂಜೆ ಸಲ್ಲಿಸಿದರು.ನಂತರ ಮಂಗಳವಾರ ಮುಂಜಾನೆ ದೇಗುಲದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೊಂಡವನ್ನು ದೇವರ ಗುಡ್ಡಪ್ಪ ಸೇರಿದಂತೆ ಹರಿಕೆ ಹೊತ್ತ ಭಕ್ತರು ಕೊಂಡಹಾಯ್ದರು. ಕೊಂಡ ಹಾಯುವ ವೇಳೆ ನೆರೆದಿದ್ದವರು ಉಘೇ ಶಂಭುಲಿಂಗಪ್ಪ ಎಂಬ ಘೋಷಣೆ ಕೂಗಿ ದೇವರ ಪ್ರಾರ್ಥನೆ ಸಲ್ಲಿಸಿದರು.
ಪಾಲಹಳ್ಳಿಯಲ್ಲಿ ಸವರ್ಣೀಯರು ಹೆಚ್ಚಾಗಿದ್ದು, ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತ ಜನಾಂಗದ ವ್ಯಕ್ತಿ ಪ್ರಧಾನ ಅರ್ಚಕರಾಗಿ ಪೂಜೆ ಸಲ್ಲಿಸುವುದು ವಿಶೇಷವಾಗಿತ್ತು.