ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸ್ಥಳೀಯ ಗ್ರಾ.ಪಂ.ಯ ಮಕ್ಕಳ ಗ್ರಾಮಸಭೆ ಶುಕ್ರವಾರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಅಧ್ಯಕ್ಷತೆಯಲ್ಲಿ ನಡೆಯಿತು.ಶನಿವಾರಸಂತೆ ಗ್ರಾ.ಪಂ.ಯಿಂದ ಹಲವು ವರ್ಷಗಳಿಂದ ಮಕ್ಕಳ ಮೂಲಭೂತ ಹಕ್ಕು, ಸಮಸ್ಯೆಗಳ ಕುರಿತಾಗಿರುವ ಮಕ್ಕಳ ಸಭೆಯನ್ನು ನಡೆಸಲಾಗಿರಲಿಲ್ಲ . ಶುಕ್ರವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಶನಿವಾರಸಂತೆಗೆ ಒಳಪಟ್ಟ ವಿವಿಧ ಸರ್ಕಾರಿ ಶಾಲೆಗಳಿಂದ ಸಾಕಷ್ಟು ಮಕ್ಕಳು ಪಾಲ್ಗೊಂಡಿದ್ದರು. ಆದರೆ 10 ಮಂದಿ ಸದಸ್ಯರನ್ನು ಒಳಗೊಂಡಿರುವ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್, ಸದಸ್ಯ ಎಸ್.ಸಿ.ಶರತ್‍ಶೇಖರ್ ಮತ್ತು ಕೆ.ಎ.ಆದಿತ್ಯ ಗೌಡ ಅವರನ್ನು ಹೊರತು ಪಡಿಸಿದಂತೆ 7 ಮಂದಿ ಸದಸ್ಯರು ಗೈರು ಹಾಜರಾಗಿದ್ದರು. ಇದರಿಂದ ಸಭೆಯಲ್ಲಿ ಗ್ರಾ.ಪಂ.ಆಡಳಿತ ಮಂಡಳಿಯಲ್ಲಿ ಸದಸ್ಯರ ಹೊಂದಾಣಿಕೆಯ ಕೊರತೆ ಆಡಳಿತ ಮಂಡಳಿಯಲ್ಲಿ ಏಕಮುಖ ನಿರ್ಧಾರ ಇವುಗಳು ಎದ್ದು ಕಾಣುತಿತ್ತು.ಸಭೆಯಲ್ಲಿ ಮಕ್ಕಳಿಂದ ಪ್ರಶ್ನೆಗಳ ಸುರಿಮಳೆ: ಸಭೆಯಲ್ಲಿ ಶನಿವಾರಸಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಯಿಷಾ ನಮ್ಮ ಶಾಲೆಯಲ್ಲಿ ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆ ಇದ್ದರೂ ಒಂದೇ ಶೌಚಾಲಯ ಇರುವುದರಿಂದ ನಾವು ಶೌಚಾಲಯಕ್ಕೆ ಹೋಗಲು ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕಾಗುತ್ತದೆ. ಹೆಚ್ಚುವರಿ ಶೌಚಾಲಯವನ್ನು ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ವಹಿಸಿದ ದೀಪಿಕಾ ಈ ಕುರಿತು ನಾನು ಗ್ರಾ.ಪಂ.ಅಧ್ಯಕ್ಷರ ಗಮನಕ್ಕೆ ತರುವ ಮೂಲಕ ಶಿಫಾರಾಸು ಮಾಡುತ್ತೇನೆ ಎಂದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಲ್ಪಿಯಾ ಪ್ರಶ್ನೆ ಮಾಡಿ ನಮ್ಮ ಶಾಲೆ ಸೇರಿದಂತೆ ಪಕ್ಕದಲ್ಲಿ ಉರ್ದು ಶಾಲೆ ಮತ್ತು ಆಸ್ಪತ್ರೆ ಸಹ ಇರುತ್ತದೆ. ಆದರೆ ಇಲ್ಲಿ ಪಟ್ಟಣದ ಕಸವಿಲೇವಾರಿ ಮಾಡುತ್ತಿರುವುದರಿಂದ ಶಾಲೆ ಸುತ್ತಮುತ್ತ ಪ್ರದೇಶದಲ್ಲಿ ದುರ್ನಾತ ಬೀರುತ್ತಿರುವುದರ ಜೊತೆಯಲ್ಲಿ ನಮಗೆ ತರಗತಿಯಲ್ಲಿ ಪಾಠ ಕೇಳಲು ಸಮಸ್ಯೆಯಾಗುತ್ತಿದೆ. ಇಲ್ಲಿ ಕಸವಿಲೇವಾರಿ ಮಾಡುವುದನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದೀಪಿಕಾ ಇದೋಂದು ಗಂಭೀರ ಸಮಸ್ಯೆಯಾಗಿದ್ದು ಗ್ರಾ.ಪಂ. ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಗ್ರಾ.ಪಂ.ಅಧ್ಯಕ್ಷರಲ್ಲಿ ಮನವಿ ಮಾಡಿದರು. ತ್ಯಾಗರಾಜ ಕಾಲೋನಿ ಶಾಲೆಯ ವಿದ್ಯಾರ್ಥಿ ನಯನ- ರಾತ್ರಿ ಸಮಯದಲ್ಲಿ ನಮ್ಮ ಶಾಲಾ ಆವರಣದೊಳಗೆ ಅಕ್ರಮವಾಗಿ ಪ್ರವೇಶ ಮಾಡುವ ಜನರು ಶಾಲಾ ಕೊಠಡಿ ಕಿಟಿಕಿ ಬಾಗಿಲಿನ ಗಾಜುಗಳನ್ನು ಒಡೆದು ಹಾಕುತ್ತಾರೆ. ಶಾಲಾ ಆವರಣದಲ್ಲಿ ತಂಬಾಕು ಮತ್ತು ವಸ್ತುಗಳನ್ನು ಬಿಸಾಡುತ್ತಾರೆ. ಶಾಲಾ ಆವರಣವನ್ನು ಗಲೀಜು ಮಾಡುತ್ತಾರೆ ನಮ್ಮ ಶಾಲೆಗೆ ಸಿ.ಸಿ.ಕ್ಯಾಮಾರದ ಜೊತೆಗೆ ಭದ್ರತೆಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು. ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಅಮಿತ್ ಪ್ರಶ್ನೆ ಮಾಡಿ-ಸರ್ಕಾರದಿಂದ ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶೇ ಎಷ್ಟರಷ್ಟು ಮೀಸಲಿದೆ ಇದರ ಬಗ್ಗೆ ಗ್ರಾ.ಪಂ.ಯವರು ಮಾಹಿತಿ ಕೊಡಿ ಎಂದು ಮನವಿ ಮಾಡಿದರು. ಶಾಲೆಯ ವಿದ್ಯಾರ್ಥಿಯೊಬ್ಬಳು ನಮ್ಮ ಶಾಲೆಗೆ ಸರಿಯಾದ ತಡೆಗೋಡೆ ಇಲ್ಲದಿರುವುದರಿಂದ ಜಾನುವಾರುಗಳು ಶಾಲಾ ಆವರಣದಲ್ಲಿ ಬೆಳೆದ ಗಿಡ, ಹೂವಿನ ಗಿಡಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಶಾಲೆಯಿಂದ ಗ್ರಾ.ಪಂ.ಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಇನ್ನಾದರೂ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಗ್ರಾ.ಪಂ. ಅವರಿಗೆ ಮನವಿ ಮಾಡಿದರು. ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಶಾಲೆಯ ಹಲವಾರು ಕುಂದು ಕೊರತೆಗಳ ಬಗ್ಗೆ ಪ್ರಶ್ನೆ ಮಾಡಿದರು. ಗ್ರಾ. ಪಂ. ಅಧ್ಯಕ್ಷೆ ಗೀತ ಹರೀಶ್ ಮಾತನಾಡಿ, ಮಕ್ಕಳ ಮೂಲ ಭೂತ ಸಮಸ್ಯೆ ಸೇರಿದಂತೆ ಶಾಲೆಯಲ್ಲಿ ಕಲಿಕೆಗೆ ಸಂಬಂಧಿಸಿದ ಸಮಸ್ಯೆ, ಸೇವೆ ಸವಲತ್ತುಗಳ ಕೊರತೆ ಮುಂತಾದವುಗಳ ಕುಂದು ಕೊರತೆಗೆ ಗ್ರಾ.ಪಂ.ಮಟ್ಟದಲ್ಲಿ ಪರಿಹಾರ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತದೆ ಎಂದರು.ಸಭೆಯಲ್ಲಿ ಗ್ರಾ.ಪಂ.ಸದಸ್ಯ ಎಸ್.ಸಿ.ಶರತ್ ಶೇಖರ್, ಆದಿತ್ಯ ಗೌಡ ಮಾತನಾಡಿದರು. ಸಭೆಯಲ್ಲಿ ಪಿಡಿಒ ಹರೀಶ್ ಮಕ್ಕಳಿಗೆ ಮಾಹಿತಿ ನೀಡಿದರು. ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ್, ಪುಟ್ಟಸ್ವಾಮಿ, ವಿವಿಧ ಶಾಲೆಯ ವಿದ್ಯಾರ್ಥಿ ಪ್ರಮುಖರು, ಗ್ರಾ.ಪಂ.ಕಾರ್ಯದರ್ಶಿ ದೇವರಾಜ್, ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದರು