ಸನಾತನ ಧರ್ಮ ಪುನರುತ್ಥಾನದ ಪ್ರತೀಕ ಶಂಕರಾಚಾರ್ಯ

| Published : May 13 2024, 12:09 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಭಾನುವಾರ ಜಗದ್ಗುರು ಶಂಕರಾಚಾರ್ಯರ ಜಯಂತ್ಯುತ್ಸವವನ್ನು ತಾಲೂಕು ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ಆಚರಿಸಲಾಯಿತು.

ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಭಾನುವಾರ ಜಗದ್ಗುರು ಶಂಕರಾಚಾರ್ಯರ ಜಯಂತ್ಯುತ್ಸವವನ್ನು ತಾಲೂಕು ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ಆಚರಿಸಲಾಯಿತು.

ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಲಾಯಿತು.

ವಕೀಲರಾದ ಸತ್ಯನಾರಾಯಣ ಶಾಸ್ತ್ರಿ ಮಾತನಾಡಿ, ಆದಿ ಶಂಕರರು ಎಂದು ಕರೆಯುವ ಆದಿ ಶಂಕರಾಚಾರರು ಹಲವಾರು ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾಗಿದ್ದಾರೆ ಎಂದು ತಿಳಿಸಿದರು.

ತಮ್ಮ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ ಅದೈತ ತತ್ವವನ್ನು ಪ್ರತಿಪಾದಿಸಿದರು ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ ಆತ್ಮನೇ ಪರಮಾತ್ಮನು ಪರಮಾತ್ಮನೇ ಆತ್ಮನು ಎಂದು ಅದ್ವೈತ ಸಿದ್ಧಾಂತದ ಮೂಲ ಸಾರವನ್ನು ಸಾರಿದರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರಾಗಿದ್ದಾರೆ ಎಂದು ತಿಳಿಸಿದರು.

ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಸಲಹೆಗಾರ ಜಿ.ಶ್ರೀನಿವಾಸ ರಾಘವನ್‌ ಮಾತನಾಡಿ, ಕೇವಲ 32 ವರ್ಷಗಳ ಕಾಲ ಜೀವಿಸಿದ್ದ ಶಂಕರಾಚಾರ್ಯರು, ಆದಿ ಶಂಕರಾಚಾರ್ಯರೆನಿಸಿಕೊಂಡು ಹಿಂದು ಧರ್ಮದ ಸತ್ಯನ್ನು ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಯತಿಗಳಾಗಿದ್ದರು. ಶಂಕರಾಚಾರ್ಯರು ಅದ್ಭುತ ಕವಿಯಾಗಿದ್ದರು ಮತ್ತು ''''''''ದೈವಿಕ ಪ್ರೇಮ''''''''ದ ಕಡೆಗೆ ಒಲವು ಹೊಂದಿದ್ದರು. ಭಜಗೋವಿಂದಂ ಆದಿ ಶಂಕರರಿಂದ ರಚಿಸಲ್ಪಟ್ಟ ಜನಪ್ರಿಯ ಹಿಂದೂ ಭಕ್ತಿ ಕಾವ್ಯವಾಗಿದೆ. ಕೇರಳದ ಕಾಲಡಿಯಲ್ಲಿ ಜನಿಸಿದ ಅವರ ಸ್ಮರಣಾರ್ಥ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಶಂಕರಾಚಾರರ ಹೆಸರಿಟ್ಟಿರುವುದು ಅರ್ಥಪೂರ್ಣ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್ ಅಶ್ವತ್ಥನಾರಾಯಣ ಕುಮಾರ್ ಮಾತನಾಡಿ, ಶಂಕರಾಚಾರ್ಯರು ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ. ಕನಕದಾಸ, ಬಸವಣ್ಣ, ಶಂಕರಾಚಾರ್ಯ ಮೊದಲಾದ ಮಹಾಮಹಿಮರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೇ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ರಾಧಮ್ಮ, ಕಸಬಾ ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ಶ್ರೀ ಶಾರದಾ ಶಂಕರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎ.ಆರ್.ನಾಗರಾಜ್ ಶ್ರೀ ಗಾಯತ್ರಿ ವಿಪ ವೇದಿಕೆಯ ಅಧ್ಯಕ್ಷ ಡಿ.ಕೆ.ನರಸಿಂಹಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ತಾಲೂಕು ಅಧ್ಯಕ್ಷ ಎಸ್.ನವೀನ್ ಕುಮಾರ್, ಕನ್ನಡ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ನಾಗರಾಜ್ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಫೋಟೋ-12ಕೆಡಿಬಿಪಿ4- ದೊಡ್ಡಬಳ್ಳಾಪುರ ತಾಲೂಕು ಆಡಳಿತದ ನೇತೃತ್ವದಲ್ಲಿ ಶಂಕರಾಚಾರ್ಯ ಜಯಂತ್ಯುತ್ಸವವನ್ನು ಭಾನುವಾರ ಆಚರಿಸಲಾಯಿತು.