ಧಾರವಾಡ:
ಕರ್ನಾಟಕ ವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಮತ್ತು ಸಕ್ಕರಿ ಬಾಳಾಚಾರ್ಯ ಆಶಾಂತಕವಿ ಟ್ರಸ್ಟ್ ಜಂಟಿಯಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕನ್ನಡ ಅಧ್ಯಯನ ಪೀಠದಲ್ಲಿ ಆಯೋಜಿಸಿದ್ದ ಶಾಂತಕವಿಗಳ ಸಾಹಿತ್ಯದ ಕುರಿತ ವಿಚಾರ ಸಂಕಿರಣ ಯಶಸ್ವಿಯಾಗಿ ಜರುಗಿತು.ಕುಲಪತಿ ಡಾ. ಎ.ಎಂ. ಖಾನ್, ಸಕ್ಕರಿ ಬಾಳಾಚಾರ್ಯರ ಕಾಲದ ಕನ್ನಡದ ಪರಿಸ್ಥಿತಿ ಪರಿಚಯಿಸಿದರು. ಬಾಳಾಚಾರ್ಯರು ಆ ಕಾಲಕ್ಕೆ ಮಾಡಿದ ಕನ್ನಡಪರ ಸಾಹಿತ್ಯ ಸಂಘಟನೆ ಶ್ಲಾಘನೀಯ. ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡಕ್ಕಾಗಿ ದುಡಿದ ಶಾಂತಕವಿಗಳಂತಹ ಮಹನೀಯರ ಕುರಿತು ಇನ್ನೂ ಕಾರ್ಯಕ್ರಮಗಳಾಗಲಿ ಎಂದರು.
ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದ್ರಿ ಮಾತನಾಡಿ, ಶಾಂತಕವಿಗಳು ತಮ್ಮ 64 ವರ್ಷಗಳ ಬದುಕಿನುದ್ದಕ್ಕೂ ಸಾಹಿತ್ಯದ ಮೂಲಕ ಲೋಕೋಪಯೋಗಿ ಮತ್ತು ಭಾವೋಪಯೋಗಿ ಕೈಂಕರ್ಯ ಮಾಡಿದ್ದಾರೆಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಕೃಷ್ಣ ನಾಯಕ, ಶಾಂತಕವಿಗಳು ಒತ್ತಡಗಳ ನಡುವೆಯೂ ನಾಟಕ ಕಲೆಯನ್ನು ಕನ್ನಡದ ಅಭ್ಯುದಯಕ್ಕಾಗಿ ಬೆಳೆಸಿದ್ದಾರೆ. ಅಧ್ಯಯನ ಪೀಠದಲ್ಲಿ ಶಾಂತಕವಿಗಳಂಥ ಅನೇಕ ಕನ್ನಡಪರ ಸದಾಶಯವುಳ್ಳ ಮಹನೀಯರ ಕುರಿತು ಇನ್ನೂ ಅನೇಕ ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಅಭಿಲಾಷೆ ಇದೆ ಎಂದರು.
ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಮುಖ್ಯಸ್ಥ ಬಾಬುರಾವ ಸಕ್ಕರಿ, ಕಾರ್ಯದರ್ಶಿ ಹನುಮೇಶ ಸಕ್ಕರಿ, ಪ್ರೊ. ಎ.ಎಂ. ಕಡಕೋಳ, ಡಾ. ಮಲ್ಲಪ್ಪ ಬಂಡಿ, ಸಿದ್ಧಾರೂಢ ಗುಗ್ಗರಿ ಮತ್ತು ಸೌಮ್ಯಾ ನೆತ್ರೇಕರ ಇದ್ದರು. ಉದ್ಘಾಟನೆಯ ನಂತರ ಶಾಂತಕವಿಗಳ ಸಾಹಿತ್ಯ, ಶಾಂತಕವಿಗಳ ನಾಟಕಗಳ ರಂಗ ಪ್ರಯೋಗ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು. ಇದೇ ವೇಳೆ ಶಾಂತಕವಿಗಳು ರಚಿಸಿದ ರಂಗಗೀತೆಗಳನ್ನು ರಾಘವ ಕಮ್ಮಾರ ಪ್ರಸ್ತುತ ಪಡಿಸಿದರು.