ಶರಣ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ: ಮೇಘಾಲಯದ ರಾಜ್ಯಪಾಲ ವಿಜಯಶಂಕರ

| Published : Nov 24 2024, 01:45 AM IST

ಶರಣ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ: ಮೇಘಾಲಯದ ರಾಜ್ಯಪಾಲ ವಿಜಯಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಕಲ್ಯಾಣದಲ್ಲಿ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ

ವಚನ, ಶರಣ ಕ್ರಾಂತಿಯಂಥದ್ದು ಬೇರೆಲ್ಲಿಯೂ ನಡೆದಿಲ್ಲ. ಶರಣ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಮೇಘಾಲಯದ ರಾಜ್ಯಪಾಲ ಸಿಎಚ್‌ ವಿಜಯಶಂಕರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬಸವಕಲ್ಯಾಣದಲ್ಲಿ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ನಡೆದಿದ್ದು ಬಸವಕಲ್ಯಾಣದಲ್ಲಿ. ಇಷ್ಟು ದೊಡ್ಡ ಕ್ರಾಂತಿ ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆದಿಲ್ಲ. ಮಾನವ ಕುಲದ ಕಲ್ಯಾಣಕ್ಕಾಗಿ ಮಹಿಳೆಯರ ಹಕ್ಕಿಗಾಗಿ ದೀನ ದಲಿತರ ಉದ್ಧಾರಕ್ಕಾಗಿ 12ನೇ ಶತಮಾನದಲ್ಲಿ ಅನುಭವ ಮಂಟಪ ಮುಖಾಂತರ ಬಸವಕಲ್ಯಾಣದಲ್ಲಿ ಬಹುದೊಡ್ಡ ಕ್ರಾಂತಿ ನಡೆಯಿತು ಈ ಕ್ರಾಂತಿಯಿಂದ ನಮ್ಮ ಕನ್ನಡ ನಾಡು ಬಹಳಷ್ಟು ಪ್ರೇರಣೆ ಪಡೆದಿದೆ ಎಂದರು.

ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತ ಎಲ್ಲಾ ಮಠ ಮಾನ್ಯಗಳಲ್ಲಿ ಕಾಣಬಹುದು. ಹುಟ್ಟಿನಿಂದ ಯಾರೂ ಮೇಲಿಲ್ಲ. ಜಾತಿಯಿಂದಲೂ ಯಾರೂ ದೊಡ್ಡವರಲ್ಲ. ಸದ್ಗುಣ ಸದಾಚಾರ ಸದ್ವಿಚಾರದಿಂದ ಮನುಷ್ಯ ದೊಡ್ಡವನಾಗುತ್ತಾನೆ ಎಂದರು.

ಬಸವಣ್ಣನವರ ನೇತೃತ್ವದಲ್ಲಿ ನಡೆದ ಕ್ರಾಂತಿ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ನಡೆದಿದ್ದರೆ ಇಂದು ಈ ಧರ್ಮ ಜಗತ್ತಿನಾದ್ಯಂತ ವಿಶಾಲವಾಗಿ ಬೆಳೆಯುತ್ತಿತ್ತು, ಈಗಲಾದರೂ ಈ ತತ್ವ ಜಗತ್ತಿಗೆ ಮುಟ್ಟಿಸಬೇಕಾಗಿದೆ ಈ ದಿಸೆಯಲ್ಲಿ ಇಲ್ಲೊಂದು ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ. ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಷ್ಟೇ ಅಲ್ಲ ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಇಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಜಗತ್ತಿನ ಅಧ್ಯಾತ್ಮಿಕ ಸಂಸತ್ತು ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ ತಿಳಿಸಿದರು.ವಚನ ವಿವಿ: ಪಟ್ಟದ್ದೇವರ ಹೋರಾಟಕ್ಕೆ ಬೆಂಬಲ

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ಶರಣು ಸಲಗರ ಸ್ವಾಗತಿಸಿ ನೂತನ ಅನುಭವ ಮಂಟಪ ಉದ್ಘಾಟನೆಗೆ ರಾಷ್ಟ್ರಪತಿ, ಮುಖ್ಯಮಂತ್ರಿಗಳನ್ನು ಕರೆಯಿಸುವ ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಮಾಡಬೇಕೆಂದು ಮನವಿ ಮಾಡಿದರು. ಅಲ್ಲದೇ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಈಗಿನಿಂದಲೇ ನಡೆಸಬೇಕಾಗಿದೆ ಎಂದು ತಿಳಿಸಿದರು.

ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಕಮ್ಮಟ ಮತ್ತು ಅನುಭವ ಮಂಟಪ ನಿರ್ಮಾಣ ನಡೆದು ಬಂದ ದಾರಿ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಗದಗಿನ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಧರ್ಮಗುರು ಬಸವಣ್ಣನವರ ಕರ್ಮಭೂಮಿ ಅಭಿವೃದ್ಧಿಯಾಗಬೇಕು 12ನೇ ಶತಮಾನದಲ್ಲಿ ಇಲ್ಲಿ ನಡೆದ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕ್ರಾಂತಿಯಾಗಿದೆ ಎಂದರು.

ಸ್ಥಾವರಕ್ಕೆ ಅಳಿಯುಂಟು ಜಂಗಮಕ್ಕೆ ಅಳಿವಿಲ್ಲ ಹೀಗಾಗಿ ಇಲ್ಲಿಯ ನೂತನ ಅನುಭವ ಮಂಟಪದ ಬೃಹತ್‌ ಕಟ್ಟಡದ ಜೊತೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಈ ದಿಸೆಯಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾಡುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಇಳಕಲಿನ ಗುರುಮಹಾಂತ ಸ್ವಾಮೀಗಳು, ಹಾರಕೂಡನ ಡಾ.ಚನ್ನವೀರ ಶಿವಾಚಾರ್ಯರು, ನೆಲಮಂಗಲದ ಸಿದ್ಧಲಿಂಗ ಸ್ವಾಮಿಗಳು, ಪ್ರಶಸ್ತಿ ಪುರಸ್ಕೃತರಾದ ನ್ಯಾಯಮೂರ್ತಿ ಗಳಾದ ನಾಗಮೋಹನ ದಾಸ್‌, ಕೆ.ಎಸ್ ರಾಜಣ್ಣ, ಬಿಎಂ ಪಾಟೀಲ್‌, ಈ.ಕೃಷ್ಣಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಂ.ಜಿ.ಮೂಳೆ, ಶಶೀಲ ನಮೋಶಿ ಹಾಗೂ ಮಾಜಿ ವಿಧಾನ ಪರಿಷತ ಸದಸ್ಯ ವಿಜಯಸಿಂಗ್‌, ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್‌ ಉಪಸ್ಥಿತರಿದ್ದರು.

ವಚನ ಸಂಗೀತ ಶಿವಕುಮಾರ ಪಂಚಾಳ, ಬೀದರ್‌ನ ಉಷಾ ಪ್ರಭಾಕರ ನೇತೃತ್ವದ ನುಪೂರ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನಗೊಂಡಿತು.ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ: ಪಟ್ಟದ್ದೇವರು

ಬಸವಕಲ್ಯಾಣ : ಶರಣರ ಕರ್ಮಭೂಮಿ, ವಚನಗಳ ಉಗಮಸ್ಥಾನವಾದ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಆಗ್ರಹಿಸಿದರು.ಅವರು 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಗತವೈಭವ ಮತ್ತೊಮ್ಮೆ ಬಸವಕಲ್ಯಾಣದಲ್ಲಿ ಬರಬೇಕೆಂಬುವದಾಗಿದೆ. ಮುಖ್ಯಮಂತ್ರಿ ಸಿದ್ಧ ರಾಮಯ್ಯ ಅವರು ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿದ್ದರು. ಇದನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾ ಉಸ್ತು ವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಗದಗಿನ ಜಗದ್ಗುರುಗಳ ನೇತೃತ್ವದಲ್ಲಿ ಪ್ರಮುಖ ಮಠಾಧೀಶರ ನಿಯೋಗವನ್ನು ಸಿಎಂ ಬಳಿ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ರಾಜ್ಯದ ಬೇರೆ ಕಡೆ ಸಂಗೀತ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಸಾಂಸ್ಕೃತಿಕ ವಿಶ್ವವಿದ್ಯಾಲಯ ಸ್ಥಾಪಿಸಿದಂತೆ ಬಸವಕಲ್ಯಾಣ ದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಮುಖಾಂತರ ಬಸವಣ್ಣನವರ ತತ್ವಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡ ಬೇಕಾಗಿದೆ ಹೀಗಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಎಂದರು.2025ರ ವರ್ಷಾಂತ್ಯಕ್ಕೆ ಅನುಭವ ಮಂಟಪ ಲೋಕಾರ್ಪಣೆ

ಬಸವಕಲ್ಯಾಣ: ಅನುಭವ ಮಂಟಪ ನಿರ್ಮಾಣಕ್ಕಾಗಿ ನಮ್ಮ ಹಿರಿಯ ಗುರುಗಳಾದ ಲಿಂ. ಡಾ. ಚನ್ನಬಸವ ಪಟ್ಟದ್ದೇವರ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಬಹಳಷ್ಟು ಶ್ರಮಿಸಿದ್ದಾರೆ. ಈ ಹಿರಿಯರ ಕನಸ್ಸು ನನಸು ಮಾಡಲು ನಾವೆಲ್ಲರೂ ಕಳೆದ ಹತ್ತಾರು ವರ್ಷಗಳಿಂದ ಶರಣ ಕಮ್ಮಟದ ಮುಖಾಂತರ ಒತ್ತಡ ತಂದು ಸರ್ಕಾರದ ವತಿಯಿಂದ 620 ಕೋಟಿ ರು. ವೆಚ್ಚದ ಬೃಹತ್‌ ಅನುಭವ ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಇದನ್ನು ಡಿಸೆಂಬರ್‌ 2025ಕ್ಕೆ ಪೂರ್ತಿಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಅವರು 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಕಮ್ಮಟ ನಡೆದು ಬಂದ ದಾರಿ, ಅನು ಭವ ಮಂಟಪ ನಿರ್ಮಾಣಕ್ಕಾಗಿ 1955ರಿಂದ ಪ್ರಯತ್ನ ಮಾಡಿದವರ ಹೆಸರುಗಳು, ಇತಿಹಾಸ ಸಹಿತವಾಗಿ ಎಳೆ ಎಳೆಯಾಗಿ ಸಭೀಕರಿಗೆ ತಿಳಿಸಿದರು.ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕೆಂದು ಬಂತನಾಳ ಶಿವಯೋಗಿಗಳು ಹಾಗೂ ಧಾರವಾಡ ಮುರುಘಾ ಮಠದ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಬಿ.ಡಿ ಜತ್ತಿ, ಬಾಬಾ ಸಾಹೇಬ ವಾರದ ಅವರ ಕನಸ್ಸಾಗಿತ್ತು. ಇದನ್ನು ಪೂರ್ತಿಗೊಳಿಸಿದವರು ಲಿಂ.ಡಾ.ಚೆನ್ನಬಸವ ಪಟ್ಟದೇವರು. ಇವರು ಹುಟ್ಟು ಹಾಕಿದ ಶರಣ ಕಮ್ಮಟ ಕಾರ್ಯಕ್ಕೆ ನಾನು, ಸ್ಥಳೀಯರಾದ ಕಾಮಶೆಟ್ಟಿ, ತಂಬಾಕೆ, ಗುರುನಾಥ ಗಡ್ಡೆ, ಡಾ.ಎಸ್‌.ಬಿ.ದುರ್ಗೆ ಮುಂತಾದವರು ಸೇರಿ ಸತತ 14 ವರ್ಷ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡು ಬಸವಕಲ್ಯಾಣದ ಅಭಿವೃದ್ಧಿಗೆ ಹತ್ತಾರು ಸಲ ಮನವಿ ಪತ್ರಗಳನ್ನು ನೀಡಲಾಯಿತು ಎಂದು ವಿವರಿಸಿದರು.ಜನಾರ್ಧನ ಪೂಜಾರಿಯವರಿಗೆ ಶರಣ ಕಮ್ಮಟಕ್ಕೆ ಕರೆಯಿಸದಾಗ ಅವರು ಇಲ್ಲಿಯ ಬಸವ ತತ್ವಕ್ಕೆ ಪ್ರಭಾವಿತರಾಗಿ ಇಂತಹ ತತ್ವವು ಜಗತ್ತಿಗೆ ತುಂಬಾ ಬೆಳಗಬೇಕು ಬಸವ ಕಲ್ಯಾಣ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಬೇಕು ಎಂಬ ನಮ್ಮ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮುಖಾಂತರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಇದರಿಂದ ಬಸವಕಲ್ಯಾಣ ಅಭಿವೃದ್ಧಿ ನಡೆಯಿತು. ನಂತರ ಬಂದ ಎಲ್ಲಾ ಮುಖ್ಯಮಂತ್ರಿಗಳು ಇದಕ್ಕೆ ಸ್ಪಂದಿಸಿದರು ನಾನು ಸಚಿವನಾಗಿದ್ದಾಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು, ನೂತನ ಅನುಭವ ಮಂಟಪದ ನೀಲನಕ್ಷೆ ತಯಾರಿಸಲು ಗೋ.ರು.ಚ ನೇತೃತ್ವದಲ್ಲಿ ಸಮಿತಿ ರಚಿಸಿ ಅದರ ವರದಿಯನ್ನು ಪಡೆಯಲಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರಲು ಯಡಿಯೂರಪ್ಪನವರು, ಬೊಮ್ಮಾಯಿಯವರು ಎಲ್ಲರೂ ಸಹಕರಿಸಿದರು ಎಂದರು.ಹೀಗಾಗಿ ಇದೊಂದು ಧಾರ್ಮಿಕ, ಐತಿಹಾಸಿಕ ಪ್ರವಾಸಿ ತಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಡಾ.ಬಸವಲಿಂಗ ಪಟ್ಟದ್ದೇವರ ಆಶಯದಂತೆ ಇಲ್ಲೊಂದು ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸಲಾಗುವುದು. ಈಗಾಗಲೇ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಇದರಂತೆ ಮುಂಬರುವ ದಿನಗಳಲ್ಲಿ ಬಸವ ತತ್ವವನ್ನು ವಿಶ್ವಕ್ಕೆ ಮುಟ್ಟಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.ವೇದಿಕೆಯ ಮೇಲೆ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು.ನಾಲ್ವರಿಗೆ ಪ್ರಶಸ್ತಿ ಪ್ರದಾನ; ರಾಜ್ಯದ ನಾಲ್ಕು ದಿಕ್ಕಿನ ಸಾಧಕರನ್ನು ಗುರುತಿಸಿ ಗೌರವ

ಬಸವಕಲ್ಯಾಣ: ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಸಾಧಕರನ್ನು ಕರೆಯಿಸಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿರುವುದು ಸ್ವಾಗತಾರ್ಹ ಕೆಲಸವಾಗಿದೆ ಎಂದು ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಡಾ.ಕೆ.ಎಸ್‌.ರಾಜಣ್ಣ ನುಡಿದರು.ಅವರು ಬಸವಕಲ್ಯಾಣದಲ್ಲಿ ಅನುಭವ ಮಂಟಪದಿಂದ ನಡೆಯುವ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿಗಳಿಂದ ಸಾಧಕರಿಗೆ ಗುರುತಿಸಿ ಗೌರವಿಸುವುದರಿಂದ ಈ ನೆಲದ ಕೀರ್ತಿ ದಶ ದಿಕ್ಕುಗಳಲ್ಲಿ ಹರಡುತ್ತದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಕ್ರಾಂತಿ ಅದ್ಭುತ ಕ್ರಾಂತಿಯಾಗಿದೆ ಎಂದರು.ಮೇಘಾಲಯದ ರಾಜ್ಯಪಾಲ ಸಿಎಚ್‌ ವಿಜಯಶಂಕರ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಎಂಎಲ್‌ಸಿ ಎಂ.ಜಿ ಮೂಳೆ, ಶಶೀಲ ನಮೋಶಿ, ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಶ್ರೀಗಳು, ಹುಲಸೂರ ಶ್ರೀಗಳು ಇನ್ನಿತರರು ಉಪಸ್ಥಿತರಿದ್ದರು.ನಾಲ್ವರು ಸಾಧಕರು : ಡಾ.ಕೆಎಸ್‌ ರಾಜಣ್ಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಲಿಂಗರಾಜಪುರ, ಬೆಂಗಳೂರು ಅವರಿಗೆ ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಪ್ರಶಸ್ತಿ ಒಂದು ಲಕ್ಷ ರುಪಾಯಿ ಹಾಗೂ ಪ್ರಶಸ್ತಿ ಫಲಕ ಹೊಂದಿದೆ.ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರಿಗೆ ಡಾ.ಎಂ.ಎಂ.ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯು 50 ಸಾವಿರ ರುಪಾಯಿ ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಸಚಿವ ಈಶ್ವರ ಖಂಡ್ರೆ ಪ್ರಶಸ್ತಿಯ ದಾಸೋಹಿಗಳಾಗಿದ್ದಾರೆ.ಮಹಾರಾಷ್ಟ್ರ ಬಸವ ಪರಿಷತ್ತು ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್‌ ಅವರಿಗೆ `ಬಸವ ಭಾಸ್ಕರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಪ್ರಶಸ್ತಿ ದಾಸೋಹಿಗಳು ಹಾರಕೂಡಿನ ಡಾ ಚೆನ್ನವೀರ ಶಿವಚಾರ್ಯರಾಗಿದ್ದಾರೆ.ಬಸವ ಟಿ.ವಿ. ಸಂಸ್ಥಾಪಕರಾದ ಈ. ಕೃಷ್ಣಪ್ಪ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಈ ಪ್ರಶಸ್ತಿಯ ದಾಸೋಹಿಗಳು ಗಂಗಮ್ಮಾ, ಗುರುನಾಥ ಪಟ್ನೆಯಾಗಿದ್ದಾರೆ.