ಸಾರಾಂಶ
ಶಿರಹಟ್ಟಿ: ಸತ್ಯ-ಶುದ್ಧ ಕಾಯಕಕ್ಕೆ ಹೆಸರಾಗಿದ್ದ ಶರಣ-ಶರಣೆಯರಿಂದ ರಚಿತವಾದ ವಚನಗಳು ನಮ್ಮ ಬಾಳಿಗೆ ದಾರಿದೀಪಗಳಾಗಿವೆ. ಕನ್ನಡ ನಾಡು ವಿಶ್ವ ಸಾಹಿತ್ಯಕ್ಕೆ ಕೊಟ್ಟ ಅಪರೂಪದ ಕೊಡುಗೆ ವಚನಗಳು. ಈ ವಚನಗಳು ಶರಣರ ಅರುವಿನ ಅನುಭಾವದ ನುಡಿಗಳಾಗಿವೆ.ಅವುಗಳನ್ನು ಕೇಳುವುದರ ಮೂಲಕ ನಮ್ಮ ಜೀವನ ಪಾವನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯ ಮುಖಂಡ ಎನ್.ಆರ್. ಕುಲಕರ್ಣಿ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ನಾಗರಾಜ ಲಕ್ಕುಂಡಿ ಮಹಾಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಸಂಜೆ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.ನಮ್ಮ ಮನಸ್ಸು ಅರುವಿನ ಬೆಳಕಿನಿಂದ ಬೆಳಗಿದಾಗ ನಮ್ಮ ಮನ ಘನವಾಗಿ ಘನ ವ್ಯಕ್ತಿತ್ವ ಬರುತ್ತದೆ. ಮನುಷ್ಯ ಅಧಿಕಾರದಿಂದ ಅಂತಸ್ತಿನಿಂದ ರೂಪ ಲಾವಣ್ಯದಿಂದ ದೊಡ್ಡವರು ಆಗುವುದಿಲ್ಲ.ಮನಸ್ಸು ದೊಡ್ಡದಾಗುವುದರಿಂದ ಅವನಿಗೆ ಘನ ವ್ಯಕ್ತಿತ್ವ ಬರುತ್ತದೆ ಎಂದು ಹೇಳಿದರು.
ಬಸವಾದಿ ಶರಣರ ವಚನ ಸಾಹಿತ್ಯ ಇಲ್ಲದೇ ಹೋಗಿದ್ದರೆ ಕನ್ನಡ ಸಾಹಿತ್ಯ ಲೋಕ ಬಡವಾಗುತ್ತಿತ್ತು.ಎಲ್ಲರ ಎಲ್ಲ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರವಿದ್ದು, ಮಾನವ ಜನಾಂಗ ಅದರಲ್ಲೂ ಯುವ ಪೀಳಿಗೆ ವಚನಾದರ್ಶ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕನ್ನು ಬದುಕುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟನೆ ಮಾಡಿದ ಪಪಂ ಮಾಜಿ ಅಧ್ಯಕ್ಷ ನಾಗರಾಜ್ ಲಕ್ಕುಂಡಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದ ಅಭಿವೃದ್ಧಿಗೆ ನೀಡಿದ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ.ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿದ ಶರಣರು ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆ ಮಾಡಲು ಮುಂದಾದ ಅವರ ವಿಚಾರಧಾರೆಗಳು ೨೧ನೇ ಶತಮಾನದಲ್ಲಿಯೂ ಪ್ರಾಮಾಮುಖ್ಯತೆ ಪಡೆದುಕೊಂಡಿವೆ ಎಂದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ್, ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ, ಬಸವರಾಜ್ ತುಳಿ, ಎಫ್.ಎಂ. ಡಬಾಲಿ ಕಾಲೇಜ ಪ್ರಾಚಾರ್ಯ ಎಂ.ಸಿ.ಭಜಂತ್ರಿ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ್ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ್ ನೂರಶೆಟ್ಟರ್, ಬಿ.ಎಸ್.ಹಿರೇಮಠ್, ಎಚ್.ಎಂ.ದೇವಗಿರಿ, ಫಕೀರೇಶ ರಟ್ಟಿಹಳ್ಳಿ,ಅಕ್ಬರ್ ಯಾದಗಿರಿ, ವೆಂಕಟೇಶ್ ಅರ್ಕಸಾಲಿ, ಎಸ್.ಎಸ್. ಪಾಟೀಲ, ರಾಮಣ್ಣ ಕಂಬಳಿ, ಗೀತಾ ಹಲಸೂರು, ಶಾಂತಾ ಪಾಟೀಲ್, ರತ್ನಾ ಬದಿ ಮುಂತಾದವರು ಭಾಗವಹಿಸಿದ್ದರು.ನೀಲಮ್ಮ ಕುಳಗೇರಿ, ರೇಣುಕಾ ಲಕ್ಕುಂಡಿ, ವೀರಮ್ಮ ಕಳಸಾಪುರ್ ವಚನ ಗಾಯನ ಮಾಡಿದರು. ನಂದಾ ಕಪ್ಪತ್ತನವರ್ ಸ್ವಾಗತಿಸಿದರು. ಎಂ.ಎ. ಮಕಾನದಾರ ನಿರೂಪಿಸಿದರು.