ಸಾರಾಂಶ
ಇಸ್ಲಾಂ ಧರ್ಮದವರು ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿಭಕ್ತಿ ಪೂರ್ವಕವಾಗಿ ಲಿಂಗಾಯಿತರಿಗೆ ಉಪದೇಶ ಮಾಡುತ್ತಿದ್ದಾರೆ. ಆದರೆ ಲಿಂಗಾಯಿತರು ಬಸವಣ್ಣನವರ ವಚನ, ತತ್ವಗಳನ್ನು ಅಧ್ಯಯನ ಮಾಡುತ್ತಿಲ್ಲ.
ಧಾರವಾಡ:
ಯಾವುದೇ ಉನ್ನತ ಕಾರ್ಯವಾಗಬೇಕಾದರೆ ಮನ ಪೂರ್ವಕ, ಭಕ್ತಿ ಪೂರ್ವಕ ಪ್ರಯತ್ನ ಮಾಡಿದಾಗ ಯಶಸ್ವಿಯಾಗಲು ಸಾಧ್ಯ ಎಂದು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.ಕರ್ನಾಟಕ ವಿವಿ ಬಸವೇಶ್ವರ ಪೀಠದಲ್ಲಿ ಗುರುವಾರ ಮುರಗೋಡದ ಶ್ರೀಮಹಾಂತಪ್ಪ ಶಿವಯೋಗಿಗಳ ಮೂರ್ತಿಯ ಅನಾವರಣದ ಸಾನ್ನಿಧ್ಯ ವಹಿಸಿದ ಅವರು, ಬಸವಾದಿ ಶರಣರ ವಚನ, ಗ್ರಂಥಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು. ಶರಣರ ಇತಿಹಾಸ ತಿಳಿಸುವ ಶರಣಗ್ರಾಮವನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಬಸವಾದಿ ಭಕ್ತರು ತನು-ಮನ ಧನದ ಮೂಲಕ ಶರಣಗ್ರಾಮ ನಿರ್ಮಿಸಲು ಮುಂದೆ ಬರಬೇಕು ಎಂದರು.
ದೊಡವಾಡದ ಜಡಿ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಿಂದ ಬಂದ ಸಂಪತ್ತನ್ನು ಸಮಾಜಕ್ಕೆ ನೀಡಬೇಕು ಎಂಬುದು ಮಹಾಂತಪ್ಪನವರ ಆಶಯವಾಗಿತ್ತು. ಸಮಾನತೆ, ದಾಸೋಹದ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಇಂದು ಇಸ್ಲಾಂ ಧರ್ಮದವರು ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿಭಕ್ತಿ ಪೂರ್ವಕವಾಗಿ ಲಿಂಗಾಯಿತರಿಗೆ ಉಪದೇಶ ಮಾಡುತ್ತಿದ್ದಾರೆ. ಆದರೆ ಲಿಂಗಾಯಿತರು ಬಸವಣ್ಣನವರ ವಚನ, ತತ್ವಗಳನ್ನು ಅಧ್ಯಯನ ಮಾಡದಿರುವುದು ಬೇಸರದ ಸಂಗತಿ ಎಂದರು.ರಾಮದುರ್ಗ ಶಿವಮೂರ್ತಿ ಮಠದ ಶಾಂತವೀರ ಸ್ವಾಮೀಜಿ, ಧಾರವಾಡದ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿದರು. ಕವಿವಿ ಬಸವೇಶ್ವರ ಪೀಠ ಮತ್ತು ಪ್ರಸಾರಾಂಗದಿಂದ ಪ್ರಕಟಗೊಂಡ ಬಸವಣ್ಣ-ಸಾಂಸ್ಕೃತಿಕ ನಾಯಕ ಮತ್ತು ಶೂನ್ಯ ಸಂಪಾದನೆ ಗ್ರಂಥಗಳನ್ನು ವಿವಿಧ ಮಠಾಧೀಶರು ಬಿಡುಗಡೆ ಮಾಡಿದರು. ಕವಿವಿ ಸಿಂಡಿಕೇಟ್ ಸದಸ್ಯ ರಾಬರ್ಟ್ ದದ್ದಾಪುರ, ಬಸವೇಶ್ವರ ಪೀಠದ ಸಂಯೋಜಕ ಪ್ರೊ. ಸಿ.ಎಂ. ಕುಂದಗೋಳ, ಡಾ. ಈರಣ್ಣ ಇಂಜನಗೇರಿ, ಶಂಕರ ಕುಂಬಿ, ಬಸವಾದಿ ಶರಣರು ಹಾಜರಿದ್ದರು.