ಸಮಾಜದಲ್ಲಿ ವಚನಗಳಿಂದ ಜಾಗೃತಿ ಮೂಡಿಸಿದ ಶರಣರು

| Published : Nov 18 2024, 12:18 AM IST

ಸಮಾಜದಲ್ಲಿ ವಚನಗಳಿಂದ ಜಾಗೃತಿ ಮೂಡಿಸಿದ ಶರಣರು
Share this Article
  • FB
  • TW
  • Linkdin
  • Email

ಸಾರಾಂಶ

ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಖ್ಯಾತಿ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಹರಿಹರದಲ್ಲಿ ಹೇಳಿದ್ದಾರೆ.

- ವಚನ ಸ್ಪಂದನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಕೆ.ಎಂ.ವೀರೇಶ್ - - - ಕನ್ನಡಪ್ರಭ ವಾರ್ತೆ ಹರಿಹರ

ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಖ್ಯಾತಿ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಹೇಳಿದರು.

ನಗರದ ಶ್ರೀಶೈಲ ಬಿ.ಇಡಿ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಹರಿಹರದ ಸಾಹಿತ್ಯ ಸಂಗಮ ಸಹಯೋಗದಲ್ಲಿ ಆಯೋಜಿಸಿದ್ದ ನಿವೃತ್ತ ಪ್ರಾಚಾರ್ಯ, ಸಾಹಿತಿ, ಪ್ರೊ. ಭಿಕ್ಷಾವರ್ತಿಮಠ ಅವರು ರಚಿಸಿದ ಆಧುನಿಕ ವಚನ ಸ್ಪಂದನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮುದಾಯದ ನಡುವೆ ಬದುಕುತ್ತಿದ್ದ ವಚನಕಾರರು ತಾವು ಕಂಡ ಮೋಸ, ಅಸತ್ಯ, ಡಾಂಭಿಕತೆ, ಮೌಢ್ಯಗಳನ್ನು ನೇರವಾಗಿ ಖಂಡಿಸಿದರು. ಬಸವಣ್ಣ ಸೇರಿದಂತೆ ಎಲ್ಲ ಮಹಿಳಾ ಮತ್ತು ಪುರುಷ ವಚನಾಕಾರರು ಕಲ್ಲು ದೇವರು ದೇವರಲ್ಲ, ಹುಸಿಯನು ನುಡಿಯಲು ಬೇಡ, ನುಡಿದರೆ ಮುತ್ತಿನ ಹಾರದಂತಿಬೇಕೆಂಬಂತಹ ಸಹಸ್ರಾರು ವಚನಗಳ ಮೂಲಕ ಜನರಲ್ಲಿ, ಸಮುದಾಯದಲ್ಲಿ ದೊಡ್ಡ ಜಾಗೃತಿ ಮೂಡಿಸಿದರು ಎಂದರು.

ವಚನಕಾರರ ವಚನಗಳನ್ನು ಅರ್ಥ ಮಾಡಿಕೊಂಡು, ಅದರಂತೆ ಬದುಕು ನಡೆಸಬೇಕೆಂದರೆ ಗಟ್ಟಿತನಬೇಕು. ಪ್ರೊ.ಭಿಕ್ಷಾವರ್ತಿಮಠ ಅವರು ಬಸವಣ್ಣನವರಿಂದ ಪ್ರೇರಿತರಾಗಿ ತಮ್ಮದೇ ಶೈಲಿಯಲ್ಲಿ ವಚನಗಳನ್ನು ರಚಿಸಿ, ನಿಷ್ಠುರತೆ ಮೆರೆದಿದ್ದಾರೆಂದು ಪ್ರಸಂಶೆ ವ್ಯಕ್ತಪಡಿಸಿದರು.

ಸಾಹಿತ್ಯ ವಿಮರ್ಶಕ ಪ್ರೊ. ಲಿಂಗರಾಜ್ ಕಮ್ಮಾರ್ ಕೃತಿ ಕುರಿತು ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ವಚನಗಳಿಂದ ಲೇಖಕರು ಹೆಚ್ಚು ಪ್ರಭಾವಿತರಾಗಿದ್ದಾರೆ. ಏಕಸಂಸ್ಕೃತಿ, ಏಕ ದೇವಾರಾಧನೆ, ಏಕ ಭಾಷೆಯಂತಹ ಅಪಾಯಕಾರಿ ಹೇರಿಕೆಯಿಂದಾಗಿ ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡಿಕೊಡುತ್ತದೆ. ಈ ದೇಶದ ನಾಡಿಮಿಡಿತವಾದ ಬಹುತ್ವವನ್ನು ಕೃತಿಕಾರರು ಬೆಂಬಲಿಸಿದ್ದಾರೆ ಎಂದರು.

ಹಿರಿಯ ಸಾಹಿತಿ, ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಪುಸ್ತಕಗಳ ಓದುವ ವ್ಯಕ್ತಿಯ ವಿಚಾರ, ಮನಸ್ಸು ವಿಶಾಲವಾಗುತ್ತದೆ. ಕನ್ನಡ ಶಾಯರಿಗಳು ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿರುವ ಭಿಕ್ಷಾವರ್ತಿ ಮಠ ಅವರು ಇನ್ನಷ್ಟು ಸಾಹಿತ್ಯ ಕೃಷಿ ಮಾಡಲಿ. ಹರಿಹರದಲ್ಲಿ ಸಾಹಿತ್ಯ ಸಂಘಟನೆಗಳ ನಡುವಿನ ಒಗ್ಗಟ್ಟು ಮೆಚ್ಚುವಂತಹುದು ಎಂದರು.

ಕೃತಿಕಾರ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ದಾಸ, ಶರಣ, ತತ್ವಪದಗಳು ಈ ದೇಶಕ್ಕೆ ಬಹುತ್ವದ ತಳಹದಿ ರೂಪಿಸಿವೆ. ಬಸವಣ್ಣರಿಂದ ಪ್ರಭಾವಿತವಾದ ಮಠಗಳಿಗೆ ಹೋದಾಗ ಬೇರೆಯವರ ಭಾವಚಿತ್ರಗಳೇ ವಿಜೃಂಭಿಸುತ್ತಿರುತ್ತವೆ. ಈ ಕುರಿತು ಸಂಬಂಧಿತ ಮಠಗಳ ಮುಖ್ಯಸ್ಥರಿಗೆ ನನ್ನ ತಕರಾರು ವ್ಯಕ್ತಪಡಿಸಿದ್ದೇನೆ ಎಂದರು.

ಹಿರಿಯ ಮುಖಂಡ ಎನ್.ಜಿ. ನಾಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ಸಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ. ಎಸ್.ಎಚ್. ಪ್ಯಾಟಿ, ಸಾಹಿತಿ ಜೆ.ಕಲೀಂ ಬಾಷಾ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಚ್. ಹೂಗಾರ್, ರಿಯಾಜ್ ಅಹ್ಮದ್, ಬಿ.ಬಿ.ರೇವಣ ನಾಯ್ಕ್, ವಿ.ಬಿ. ಕೊಟ್ರೇಶಪ್ಪ, ಮೃತ್ಯುಂಜಯ ಮಾತನಾಡಿದರು. ಕಲಾವಿದ ಕತ್ತಿಗೆ ಪರಮೇಶ್ವರಪ್ಪ ತಂಡದವರು ಸಂಗೀತ ಕಾರ್ಯಕ್ರಮ ನೀಡಿದರು.

- - - -17ಎಚ್‍ಆರ್‍ಆರ್01:

ಹರಿಹರದಲ್ಲಿ ಭಾನುವಾರ ನಿವೃತ್ತ ಪ್ರಾಚಾರ್ಯ ಎಚ್.ಎ. ಭಿಕ್ಷಾವರ್ತಿಮಠ ರಚಿಸಿದ ಆಧುನಿಕ ವಚನ ಸ್ಪಂದನ ಕೃತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಬಿಡುಗಡೆಗೊಳಿಸಿದರು.