ಸಾರಾಂಶ
ಶಿಗ್ಗಾಂವಿ: ಸಾಮಾಜಿಕ ಸಮಾನತೆ, ಆತ್ಮವಿಮರ್ಶೆ, ನಡೆ-ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ೩೧ನೇ ಶರಣ ಸಂಸ್ಕೃತಿ ಉತ್ಸವ-೨೦೨೪ ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ೪ನೇ ದಿನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶರಣ ಸಂಸ್ಕೃತಿಯ ಇನ್ನೊಂದು ಲಕ್ಷಣ ಭಕ್ತಿ, ಮೌಢ್ಯ, ಶ್ರೇಣೀಕೃತ ಸಮಾಜ, ವರ್ಣಭೇದ, ಶೋಷಣೆ, ಅಸಮಾನತೆ, ವೇದಾಗಮಪುರಾಣ ಬಹುದೇವತೋಪಾಸನೆ ಮುಂತಾದವುಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ. ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಸಂಸ್ಕೃತಿ, ನಮ್ಮ ಪರಂಪರೆಯ ಕುರಿತು, ಶರಣ ಸಂಸ್ಕೃತಿಯಲ್ಲಿರುವ ಹತ್ತು ಹಲವು ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕ ಎನ್ನುವುದನ್ನು ಮನವರಿಕೆ ಮಾಡಬೇಕು ಎಂದರು.ಚಿತ್ರದುರ್ಗ ಸಂಸ್ಥಾನಮಠದ ಜಗದ್ಗುರು ಮಡಿವಾಳ ಮಾಚಿದೇವ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವವು ಬಸವಾದಿ ಶರಣರ ಸಂಸ್ಕೃತಿಯ ಆಶಯದಂತೆ ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ, ಸರ್ವರ ಪಾಲ್ಗೊಳ್ಳುವಿಕೆಯ ಮತ್ತು ಸರ್ವೋದಯ ಪ್ರೇರಣೆಯ ಹಬ್ಬವಾಗಿದೆ ಎಂದರು.
ಮಾಜಿ ಶಾಸಕ ಸಯ್ಯದ್ ಅಜ್ಜೀಂಪೀರ್ ಖಾದ್ರಿ ಮಾತನಾಡಿ, ತಂದೆ-ತಾಯಿಯರು ತಮ್ಮ ಜೀವಮಾನದ ದುಡಿಮೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಿ ವಿದ್ಯಾವಂತರನ್ನಾಗಿಸುತ್ತಿದ್ದಾರೆ. ಅದರ ಬದಲು ತಮ್ಮ ದಿನದ ಕೆಲ ಸಮಯವನ್ನು ಮಕ್ಕಳಿಗೆ ಕೊಟ್ಟು ಅವರನ್ನು ಇಂತಹ ಪ್ರವಚನಗಳಲ್ಲಿ ಭಾಗಿಯಾಗಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು. ಶಿಗ್ಗಾಂವಿ ಸೌಹಾರ್ದತೆಯ ಪುಣ್ಯಭೂಮಿಯಾಗಿರುವಲ್ಲಿ ಶ್ರೀ ವಿರಕ್ತ ಮಠದ ಶ್ರೀಗಳ ಪಾತ್ರವಿದ್ದು, ಈದ್ ಮಿಲಾದ ಆಗಲಿ, ದೀಪಾವಳಿಯಾಗಲಿ ಎಲ್ಲರಿಗಿಂತ ಮೊದಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ನಮ್ಮನ್ನು ಆಹ್ವಾನಿಸುತ್ತಾರೆ ಎಂದರು.ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಭವ್ಯ ಪರಂಪರೆಯ ವಿರಕ್ತಮಠವು ತನ್ನ ನಿರಂತರ ಕಾರ್ಯಕ್ರಮಗಳ ಮೂಲಕ ರಾಜ್ಯದ ಶ್ರೀಗಳ ಆಶೀರ್ವಾದ ಮತ್ತು ಆಶೀರ್ವಚನಗಳು ನಮಗೆ ಸಿಗುವಂತೆ ಮಾಡುತ್ತಿದೆ ಎಂದರು.
ಸಮ್ಮುಖವನ್ನು ಸ್ಥಳೀಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಅಣ್ಣಿಗೇರಿಯ ಸೀತಾಗಿರಿಯ ಡಾ. ಎ.ಸಿ. ವಾಲಿಗುರುಗಳು ಪ್ರವಚನ ನೀಡಿದರು. ತಾಲೂಕಿನ ಹಡಪದ ಸಮಾಜ ಹಾಗೂ ಮಡಿವಾಳ ಸಮಾಜದ ಮುಖಂಡರು ಎಲ್ಲ ಶ್ರೀಗಳನ್ನು ಸನ್ಮಾನಿಸಿದರು. ಆನಂತರ ಧರ್ಮಕಾರ್ಯದ ದಾನಿಗಳನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.ಪ್ರೊ. ಶಶಿಕಾಂತ ರಾಠೋಡ್, ನಾಗಪ್ಪ ಬೆಂತೂರ ಹಾಗೂ ದಾನಿಗಳು ಇದ್ದರು.