ಸಾರಾಂಶ
ಲಕ್ಷ್ಮೇಶ್ವರ: ಶರಣರ ವಚನಗಳು ಇಂದಿಗೂ ನಮಗೆಲ್ಲ ದಾರಿ ದೀಪವಾಗಿವೆ. ಶರಣರ ಅನುಭಾವದ ನುಡಿ ಸಮಾಜದ ಓರೆಕೋರೆ ತಿದ್ದುವ ಸಾಧನಗಳಾಗಿವೆ ಎಂದು ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಹೇಳಿದರು.
ಸೋಮವಾರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಕಾಯಕ ಶರಣರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಾಯಕ ಶರಣರ ವಚನಗಳು ಇಂದಿಗೂ ದಾರಿದೀಪ. 12ನೇ ಶತಮಾನದಲ್ಲಿ ಶರಣರು ಕ್ರಾಂತಿ ಮಾಡುವ ಮೂಲಕ ಸಮಾಜದ ಓರೆಕೋರೆ ತಿದ್ದುವ ಕಾರ್ಯದಲ್ಲಿ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸೂಳೆ ಸಂಕವ್ವ ಪ್ರಮುಖರು. ಇವರು ತಮ್ಮ ಕಾಯಕದಿಂದ ಕೈಲಾಸ ಕಂಡವರು. ಇವರು ರಚಿಸಿದ ವಚನಗಳು ಇಂದಿಗೂ ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರೊಂದಿಗೆ ಪ್ರತಿವರ್ಷ ಫೆಬ್ರುವರಿ ಹತ್ತರಂದು ಕಾಯಕ ಶರಣರ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಈ ವೇಳೆ ಶಾಲೆಯ ಶಿಕ್ಷಕಿ ಎಚ್.ಡಿ. ನಿಂಗರೆಡ್ಡಿ ಮಾತನಾಡಿ, ಮಾದರ ಚೆನ್ನಯ್ಯ 12ನೇ ಶತಮಾನದಲ್ಲಿ ಸತ್ಯ ಶುದ್ಧ ಕಾಯಕಕ್ಕೆ ಹೆಸರಾದವರು. ತಮಿಳುನಾಡಿನ ಚೋಳ ರಾಜನ ಅರಮನೆಯ ಲಾಯಕ್ಕೆ ಹುಲ್ಲು ತರುವ ಕೆಲಸ ಮಾಡುತ್ತಿದ್ದ ಇವರು ಬಸವಣ್ಣನವರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಶ್ರೇಷ್ಠ ವಚನಕಾರರಾದರು ಎಂದು ಹೇಳಿದರು.
ಮಾದರ ಧೂಳಯ್ಯ ಪಾದರಕ್ಷೆ ಸಿದ್ಧಪಡಿಸುವ ಕಾಯಕವನ್ನು ಕೈಗೊಂಡಿದ್ದು, ಕಾಮ ಧೂಮಧೂಲೇಶ್ವರ ಎಂಬ ಅಂಕಿತದಿಂದ ಸುಮಾರು 106 ವಚನ ರಚಿಸಿದ್ದಾನೆ.ಶರಣ ಡೋಹರ ಕಕ್ಕಯ್ಯ ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಬಸವಾದಿ ಶರಣರ ಗೌರವಕ್ಕೆ ಪಾತ್ರನಾದ ದಲಿತ ಶರಣ ಅಭಿನವ ಮಲ್ಲಿಕಾರ್ಜುನ ಅಂಕಿತದಲ್ಲಿ ಆರು ವಚನ ಬರೆದಿದ್ದಾನೆ. ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯನವರು ಸಹ 12ನೇ ಶತಮಾನದ ಶಿವಶರಣರ ಸಾಲಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ತಮ್ಮ ವಚನಗಳಲ್ಲಿ ಸಮಾಜದಲ್ಲಿನ ಅಂಕುಡೊಂಕು ತಿದ್ದಿ ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಕಾಯಕ ಶರಣರ ವಚನ ನಾವು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಈ ವೇಳೆ ಶಿಕ್ಷಕ ಆರ್.ಎಂ. ಶಿರಹಟ್ಟಿ, ಆರ್.ಕೆ. ಉಪನಾಳ, ಎಲ್.ಎ. ಬಣಕಾರ, ಅಕ್ಷತಾ ಕಾಟೆಗಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.