ಸಾರಾಂಶ
ಹೂವಿನಹಡಗಲಿ: 12ನೇ ಶತಮಾನದಲ್ಲೇ ಶರಣರು ಅನುಭವ ಮಂಟಪವನ್ನು ರಚನೆ ಮಾಡಿಕೊಂಡು ಸಮಾಜದಲ್ಲಿದ್ದ ಮೇಲು-ಕೀಳು ಎಂಬ ಭಾವನೆಯನ್ನು ತೊಲಗಿಸಲು ಸಾಕಷ್ಟು ಶ್ರಮಿಸಿದ್ದಾರೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ಲಿಂಗನಾಯಕನಹಳ್ಳಿ ಮಠದ ಜಂಗಮ ಕ್ಷೇತ್ರದಲ್ಲಿ ಮೈಲಾರ ಬಸವ ಲಿಂಗ ಶರಣರ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮ ಸಮಾಜದ ಪರಿಕಲ್ಪನೆ ಹೊಂದಿದ್ದ ಅಂದಿನ ಎಲ್ಲ ಶಿವ ಶರಣರು ಸಾಕಷ್ಟು ಹೋರಾಟ ಮಾಡಿದ್ದರೂ, ಇಂದಿಗೂ ಜಾತಿ ಮನೋಭಾವನೆ ತೊಲಗಿಸಲು ಸಾಧ್ಯವಾಗಿಲ್ಲ. ಇಂತಹ ಮಠ-ಮಾನ್ಯಗಳು ಆಯೋಜಿಸುವಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅವರ ವಚನಗಳು ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ನೆಮ್ಮದಿ ಹೊಂದಲು ಸಾಧ್ಯವಿದೆ ಎಂದರು.ಬಡವರು ದೇವಸ್ಥಾನಗಳನ್ನು ನಿರ್ಮಿಸಲು ಅಸಾಧ್ಯದ ಮಾತು. ಆದ್ದರಿಂದ ಅಂದು ಬಸವಣ್ಣನವರು ತಮ್ಮ ಮನದಲ್ಲೇ ದೇಗುಲದ ಪರಿಕಲ್ಪನೆಯನ್ನು ಮೂಡಿಸಿದ್ದಾರೆ. ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿರುವ ಅವರು, ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದಾರೆ. ಅಂತಹ ಶರಣರ ವಚನ ಸಾಹಿತ್ಯವನ್ನು ನಾಶ ಮಾಡುವಂತಹ ಹುನ್ನಾರಗಳು ನಡೆದಿದ್ದವು. ಆ ಸಂದರ್ಭದಲ್ಲಿ ನೂರಾರು ಶರಣರು ವಚನ ಚಳವಳಿಯನ್ನು ಆರಂಭಿಸಿದ ಪರಿಣಾಮವಾಗಿ ವಚನ ಸಾಹಿತ್ಯ ರಕ್ಷಣೆಯಾಗಿದೆ ಎಂದರು.
ವೀರಶೈವ ಲಿಂಗಾಯಿತ ಸಮಾಜ ಎಲ್ಲ ಸಮಾಜದಗಳೊಂದಿಗೆ ಸಹೋದರ ಭಾವನೆಯನ್ನು ಹೊಂದಿದೆ. ಮಠ-ಮಾನ್ಯಗಳು ಸಹಬಾಳ್ವೆಯ ಕಲ್ಪನೆಯನ್ನು ಬೋಧನೆ ಮಾಡುತ್ತಿದ್ದು, ನಮ್ಮ ದೇಶದ ಸಂಸ್ಕೃತಿಯಲ್ಲಿ ನಾನಾ ರೀತಿಯ ಆಚರಣೆಗಳಿವೆ. ನಾವು ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಹೇಳಿದರು.ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಜಗತ್ತಿನ ಎಲ್ಲ ಶಕ್ತಿಗಳ ಆವಿಷ್ಕಾರ, ಸಂಶೋಧನೆ ಮಾಡಿದ್ದಾನೆ. ಆದರೆ ತನ್ನ ಮನಸ್ಸಿನ ಬದಲಾವಣೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವನ ಮನಸ್ಸು ಹೇಳಿದಂತೆ ದೇಹದ ಎಲ್ಲ ಅಂಗಾಂಗಳು ಕೇಳುತ್ತಿವೆ. ಆದರಿಂದ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಸೇರಿದಂತೆ ಇತರರು ಮಾತನಾಡಿದರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ, ಆರೋಗ್ಯಧಾಮ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ವೈ. ರುದ್ರಪ್ಪ ಅವರಿಗೆ ಚನ್ನವೀರ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಂಗಮ ಕ್ಷೇತ್ರದ ಚನ್ನವೀರ ಶರಣರು, ಗವಿಸಿದ್ದೇಶ್ವರ ಶಾಖಾ ಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಕೋರಿ, ತಾಲೂಕು ಅಧ್ಯಕ್ಷ ಮುಂಡವಾಡ ಉಮೇಶ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ನಿವೃತ್ತ ಪ್ರಾಚಾರ್ಯ ಡಾ. ರುದ್ರಪ್ಪ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.