ಅಂತರಂಗದ ಅವಗುಣ ಅಳಿಯಲು ಶರಣರ ವಚನಗಳು ಸಹಕಾರಿ: ಬಸವ ಶಾಂತಲಿಂಗ ಸ್ವಾಮೀಜಿ

| Published : Feb 06 2025, 12:17 AM IST

ಅಂತರಂಗದ ಅವಗುಣ ಅಳಿಯಲು ಶರಣರ ವಚನಗಳು ಸಹಕಾರಿ: ಬಸವ ಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಠದಂಗಳದಲ್ಲಿ ಮಹಾಮನೆ-ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬಸವ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಹಾವೇರಿ: ಅಂತರಂಗದ ಅವಗುಣ ಅಳಿಯಲು ಶರಣರ ವಚನಗಳು ಸಹಕಾರಿ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಬಸವ ಕೇಂದ್ರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ಜಗಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಆಶ್ರಯದಲ್ಲಿ ಜರುಗಿದ ಮಠದಂಗಳದಲ್ಲಿ ಮಹಾಮನೆ-ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಾವು ಮಾಡುವ ಕಾರ್ಯದಿಂದ ಮನುಕುಲಕ್ಕೆ ಶ್ರೇಷ್ಠ ಮಾರ್ಗ ತೋರಿದವರು ಸವಿತಾ ಮಹರ್ಷಿಗಳು ಮತ್ತು ಹಡಪದ ಅಪ್ಪಣ್ಣನವರು. ತಮ್ಮ ವಚನಗಳ ಮೂಲಕ ಮನುಷ್ಯನ ಮನದೊಳಗಿನ ಕತ್ತಲೆಯನ್ನು ಕಳೆಯುವ ಕಾರ್ಯ ಮಾಡಿದರು. ಕತ್ತಿ ಮತ್ತು ಕನ್ನಡಿಯಿಂದ ಯಾವುದೇ ವಸ್ತುವನ್ನು ಅಂದಗೊಳಿಸಬಹುದು ಅಥವಾ ವಿರೂಪಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಡಾರಿ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ್ ಮಾತನಾಡಿ, ಸವಿತಾ ಮಹರ್ಷಿಗಳು ಕನ್ನಡಿ ಮತ್ತು ಬಾಚಣಿಕೆಯ ಪರಿಕಲ್ಪನೆ ತೋರಿಸಿಕೊಟ್ಟವರು. ಮನುಷ್ಯನ ಮನಸ್ಸನ್ನು ತಿದ್ದುವ ಕೆಲಸ ಕಲೆಯಿಂದ ಮಾತ್ರ ಸಾಧ್ಯ. ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯನ್ನು ಖಳನಾಯಕಿಯಾಗಿ ವಿಜೃಂಭಿಸಲಾಗುತ್ತಿದೆ. ದೊಡ್ಡಾಟದಂಥ ಕುಣಿತ ಮತ್ತು ವೇಷಭೂಷಣ ಯಾವುದೇ ರಂಗ ಪ್ರಕಾರಗಳಲ್ಲಿಲ್ಲ ಎಂದರು.

ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪುರ, ಎಸ್.ಆರ್. ಹಿರೇಮಠ, ಹನುಮಂತಗೌಡ ಗೊಲ್ಲರ ಮಾತನಾಡಿದರು.

ಅನಿತಾ ಹರನಗಿರಿ ಅಧ್ಯಕ್ಷತೆ ವಹಿಸಿದ್ದರು. ಗೋಪಿ, ಜಯಶ್ರೀ ಕೊರಗರ, ಸಾವಿತ್ರಿ ಹೆಬ್ಬಳ್ಳಿ, ಅಶೋಕ ಉಪಲಿ, ಬಸವರಾಜ ಸಣ್ಣಂಗಿ, ಚಂದ್ರಶೇಖರ ಮಾಳಗಿ, ಮುರಿಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ನಾಗೇಂದ್ರಪ್ಪ ಮಂಡಕ್ಕಿ, ಶಿವಾನಂದ ಹೊಸಮನಿ ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ಜಿ.ಎಂ. ಓಂಕಾರಣ್ಣನವರ ಸ್ವಾಗತಿಸಿ, ವಂದಿಸಿದರು.

ಮನಸೆಳೆದ ದೊಡ್ಡಾಟ

ನಗರದ ಹೊಸಮಠದ ಆವರಣದಲ್ಲಿ ಕರ್ಜಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವೀರ ಅಭಿಮನ್ಯು ದೊಡ್ಡಾಟ ಪ್ರೇಕ್ಷಕರ ಮನಸೆಳೆಯಿತು. ಯುವ ಬಾಲಕನಾದರೂ ಅಭಿಮನ್ಯು ತನ್ನ ಪ್ರಾಣದ ಹಂಗನ್ನು ತೊರೆದು ಚಕ್ರವ್ಯೂಹದಲ್ಲಿ ಸೆಣಸಾಡುವ ಸಂದರ್ಭದಲ್ಲಿನ ರೋಚಕತೆ ಮೆಚ್ಚುಗೆಗೆ ಪಾತ್ರವಾಯಿತು. ಸಾಹಿತಿ ಜಿ.ಎಂ.ಓಂಕಾರಣ್ಣನವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ದೊಡ್ಡಾಟದಲ್ಲಿ ಭಾಗವತರಾಗಿ ನಾಗರಾಜ ಪೂಜಾರ, ಮೃದಂಗ ವಾದಕರಾಗಿ ರುದ್ರಪ್ಪ ಹಳ್ಳೂರ, ಶಾಹನಾಯ್ ವಾದಕರಾಗಿ ಚಂದ್ರಪ್ಪ ಭಜಂತ್ರಿ, ಹನುಮಂತಪ್ಪ ಹೊತಗಿ ಹಾರ್ಮೋನಿಯಂ ಸಾಥ್ ನೀಡಿದರು. ಶಂಕರ ಅರ್ಕಸಾಲಿ ವಸ್ತ್ರಾಲಂಕಾರ ವಿನ್ಯಾಸಗೊಳಿಸಿದರು. ಬಾಲ ಕಲಾವಿದರಾಗಿ ಆಕಾಶ ಜಿಡ್ಡಿ, ಆಕಾಶ ಕೆಂಪೆಲ್ಲನವರ, ಚಾಮರಾಜ ಬಿದರಗಡ್ಡಿ, ಪ್ರಜ್ವಲ್ ಕೊಂಡೆಮ್ಮನವರ, ಗಣೇಶ ಗುಳೇದ, ವಿಜಯಕುಮಾರ ಕರಡೆಪ್ಪನವರ, ಮಾಲತೇಶ ಬಾಬರ, ಮಣಿಕಂಠ ಹಾವೇರಿ, ಭುವನಕುಮಾರ ಮಲ್ಲಾರಿ ಗಮನ ಸೆಳೆದರು.ದೊಡ್ಡಾಟ

ನಾಟಕಗಳು ಮತ್ತು ರೂಪಕಗಳು ವರ್ತಮಾನದ ನೈತಿಕತೆಯನ್ನು ತೋರಿಸುವ ಸಾಧನಗಳು. ಕಣ್ಮರೆಯಾಗುತ್ತಿರುವ ದೊಡ್ಡಾಟ ಕಲೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಆಸಕ್ತಿ ತೋರಿರುವ ಕರ್ಜಗಿ ಮಕ್ಕಳ ನಡೆ ಅಭಿನಂದನೀಯ. ದೊಡ್ಡಾಟಕ್ಕೆ ಭವಿಷ್ಯವಿದೆ ಎಂದು ತಮ್ಮ ಅಭಿನಯದ ಮೂಲಕ ಸಾಕ್ಷೀಕರಿಸಿರುವ ಒಟ್ಟು ತಂಡದ ಶ್ರಮ ಶ್ಲಾಘನೀಯ.

ಸತೀಶ ಕುಲಕರ್ಣಿ, ಸಾಹಿತಿಗಳು ಹಾವೇರಿ.