ಸಾಮಾನ್ಯ ರೈತನ ಮಗ ಶರಣಬಸವ ಯಾದಗಿರಿ ಜಿಲ್ಲೆಗೆ ಪ್ರಥಮ

| Published : May 10 2024, 01:32 AM IST

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಅಭ್ಯಸಿಸಿದ ಸಾಮಾನ್ಯ ರೈತನ ಮಗನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ಯಾದಗಿರಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿರುವುದು ಇಡೀ ಜಿಲ್ಲಾದ್ಯಂತ ಪ್ರಜ್ಞಾವಂತ ನಾಗರಿಕರು ಹುಬ್ಬೇರಿಸುವಂತೆ ಮಾಡಿದೆ.

ಬಸವರಾಜ ಕಟ್ಟೀಮನಿ

ಕನ್ನಡಪ್ರಭ ವಾರ್ತೆ ಹುಣಸಗಿ

ಸರ್ಕಾರಿ ಶಾಲೆಯಲ್ಲಿ ಅಭ್ಯಸಿಸಿದ ಸಾಮಾನ್ಯ ರೈತನ ಮಗನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ಯಾದಗಿರಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿರುವುದು ಇಡೀ ಜಿಲ್ಲಾದ್ಯಂತ ಪ್ರಜ್ಞಾವಂತ ನಾಗರಿಕರು ಹುಬ್ಬೇರಿಸುವಂತೆ ಮಾಡಿದೆ.

ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಹುಣಸಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶರಣಬಸವ ಕುರಿ ಒಟ್ಟು 625 ಕ್ಕೆ 620 ಅಂಕ (ಶೇ.99.2) ಪಡೆಯುವದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ತಾಲೂಕಿನ ಗೆದ್ದಲಮಾರಿ ಗ್ರಾಮದ ಶರಣಬಸವನ ತಂದೆ ಭೀಮಣ್ಣ ಕುರಿ ಅವರು ತಮ್ಮ ಸ್ವಂತ ಎರಡು ಎಕರೆ ಜಮೀನಿನಲ್ಲಿ ದುಡಿದು ಮಗನನ್ನು ಓದಿಸುತ್ತಿದ್ದಾರೆ. ಸ್ವಗ್ರಾಮ ಗೆದ್ದಲಮಾರಿ ಗ್ರಾಮದಲ್ಲಿ 1 ನೇ ತರಗತಿಯಿಂದ 6 ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿದ ಶರಣಬಸವ ನಂತರ ಹುಣಸಗಿ ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.

ಶಾಲೆಯ ಶಿಕ್ಷಕರ ಸಲಹೆ, ಮಾರ್ಗದರ್ಶದಿಂದ ಶ್ರದ್ಧೆಯಿಂದ ಓದಲು ನನ್ನ ಮಗನಿಗೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ತಂದೆ ಭೀಮಣ್ಣ "ಕನ್ನಡಪ್ರಭ "ದೆದುರು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು ವತಿಯಿಂದ ನಡೆದ "ತಪಸ್ " ಪರೀಕ್ಷೆಯ ಮೂರು ಹಂತಗಳಲ್ಲೂ ಉತ್ತೀರ್ಣನಾಗಿ, ಸದ್ಯ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರತಿಷ್ಠಿತ ಕಾಲೇಜಿಗೆ ಎರಡು ವರ್ಷಗಳ ಪಿಯುಸಿ ಉಚಿತ ವಸತಿ ಮತ್ತು ಶಿಕ್ಷಣ ಪಡೆಯಲು ಆಯ್ಕೆಯಾಗಿದ್ದಾನೆ.

ಅದೇ ಕಾಲೇಜಿನಲ್ಲಿ ಜೆಇಇ ಹಾಗೂ ಐಐಟಿ ಪರೀಕ್ಷೆಗಳಿಗೆ ಉಚಿತ ತರಬೇತಿ ಪಡೆಯಲಿದ್ದಾನೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಅಶೋಕ ನೀಲಗಾರ, ರಘುವೀರ ಬಡಿಗೇರ, ಅಶೋಕ ರಾಜನಕೋಳೂರ, ಸಂಗನಗೌಡ ಧನರೆಡ್ಡಿ ಸೇರಿದಂತೆ ಇನ್ನಿತರ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.