ವಚನದ ಮೂಲಕ ಮಾನವೀಯ ಗುಣ ಬಿತ್ತಿದ್ದ ಶರಣರು: ಮಾತೆ ಗಂಗಾದೇವಿ

| Published : Oct 19 2024, 01:32 AM IST / Updated: Oct 19 2024, 01:33 AM IST

ಸಾರಾಂಶ

ಬಸವ ಧರ್ಮಪೀಠದ ಬಸವ ಮಹಾಮನೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಜರುಗಲಿರುವ 23ನೇ ಕಲ್ಯಾಣ ಪರ್ವದ ಧರ್ಮ ಚಿಂತನ ಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ

ಕಲ್ಯಾಣದಲ್ಲಿ ಕ್ರಾಂತಿ ನಡೆಸಿದ ಶರಣರು ವಿಶ್ವಕ್ಕೆ ವಚನ ಸಾಹಿತ್ಯ ನೀಡುವ ಮೂಲಕ ಮಾನವೀಯತೆಯನ್ನು ಬಿತ್ತಿದ್ದಾರೆ ಅಂತಹ ವಚನಗಳಲ್ಲಿನ ಅಡಗಿರುವ ಮೌಲ್ಯಗಳನ್ನು ಅರಿಯಬೇಕು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.

ಅವರು ಇಲ್ಲಿಯ ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಜರುಗಲಿರುವ 23ನೇ ಕಲ್ಯಾಣ ಪರ್ವದ ಧರ್ಮ ಚಿಂತನ ಗೋಷ್ಠಿ ಯಲ್ಲಿ ಮಾತನಾಡಿ, ಬಸವಕಲ್ಯಾಣ ಸಾಮಾನ್ಯ ಪಟ್ಟಣವಲ್ಲ 12ನೇ ಶತಮಾನದಲ್ಲಿ 770 ಶಿವಶರಣರು ಕಾಯಕದ ಮೂಲಕ ತತ್ವ ಸಾರಿದ್ದಾರೆ. ಅಲ್ಲದೆ. ಅಂದು ಗಣಪರ್ವಗಳು ನಡೆಯುತ್ತಿದ್ದವು. ಆದರೆ, ಮತ್ತೆ 21ನೇ ಶತಮಾನದಲ್ಲಿ ಮತ್ತೆ ಕಲ್ಯಾಣ ಪರ್ವದ ಮೂಲಕ ಮರುಕಳಿಸುತ್ತಿವೆ. ಶರಣರ ಸಂಕಲ್ಪದಂತೆ ಕಲ್ಯಾಣ ಪರ್ವ ನಡೆಯುತ್ತಿದೆ ಇದರಲ್ಲಿ ನಾವೆಲ್ಲರು ಭಾಗಿಯಾಗಿದ್ದೇ ಪುಣ್ಯ ಎಂದು ತಿಳಿಸಿದರು.

ಲಿಂ.ಡಾ.ಮಾತೆ ಮಹಾದೇವಿ ಅವರು ವಿಶ್ವದ ಜನರು ಕಲ್ಯಾಣಕ್ಕೆ ಬರಬೇಕು ಬಸವ ತತ್ವ, ವಚನ ಸಾಹಿತ್ಯ ವಿಶ್ವದ ಜನರಿಗೆ ತಿಳಿಯುವಂತಾಗಬೇಕು ಎಂಬ ದೃಷ್ಟಿಯಿಂದಾಗಿ ಬಸವಕಲ್ಯಾಣದಲ್ಲಿ 108 ಅಡಿ ಬಸವ ಪುತ್ಥಳಿ ನಿರ್ಮಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಕುಂಬಳಗೂಡಿನಲ್ಲಿ 112 ಅಡಿ ಬಸವ ಪುತ್ಥಳಿ ನಿರ್ಮಿಸಲು ಸಂಕಲ್ಪ ಮಾಡಿದ್ದರು. ಹೀಗಾಗಿ ಆ ಕಾರ್ಯ ಮುಂದೆ ಸಾಗಬೇಕಾದರೆ ಬಸವ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಲಬುರಗಿಯ ಖ್ಯಾತ ಚಿಂತಕ ಆರ್‌.ಕೆ. ಹುಡಗಿ ತಮ್ಮ ಅನುಭಾವ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಇದೇ ನೆಲದಲ್ಲಿ ಅನೇಕ ಚಳುವಳಿ ನಡೆಸಿದ್ದಾರೆ ಅಂತಹ ಚಳವಳಿ ತಿಳಿದುಕೊಳ್ಳುವ ಸಲುವಾಗಿ ಇಂತಹ ಪರ್ವಗಳು ಆಚರಿಸಲಾಗುತ್ತಿದೆ ಎಂದ ಅವರು, ಲಿಂಗಾನಂದ ಅಪ್ಪಾಜಿ ಹಾಗೂ ಮಾತಾಜಿ ಅವರು ಎಲ್ಲೆಡೆ ಸುತ್ತಾಡಿ ಮನೆ ಮನೆಗೆ ಬಸವ ತತ್ವ, ವಚನ ಸಾಹಿತ್ಯ ಮುಟ್ಟಸಿದ ಕೀರ್ತಿವಂತರು ಎಂದು ತಿಳಿಸಿದರು.

ಗೋರ್ಟಾ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ಮಾತನಾಡಿ, ಇಂದು ನಾವೆಲ್ಲರೂ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ಭಕ್ತಿಯ ಮಹಾಮನೆ ಕಟ್ಟಿದ್ದರು. ಹೀಗಾಗಿ ಶರಣರು ನೀಡಿದ ವಚನ ಸಾಹಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶರಣರು ತೋರಿದ ಮಾರ್ಗದಲ್ಲಿ ಮುಂದೆ ಸಾಗಬೇಕು ಹಾಗೂ ಬಸವ ತತ್ವದಲ್ಲಿ ಆನಂದಮಯ ಜೀವನ ಇದೆ. ಹೀಗಾಗಿ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ, ಅವುಗಳನ್ನು ಅರಿಯಬೇಕು ಎಂದರು.

ಈ ವೇಳೆ ಬೇಲೂರನ ಶಿವಕುಮಾರ ಸ್ವಾಮೀಜಿ, ಸಂಜಯ ಮಾಕಲ, ವಿಜಯಕುಮಾರ ಪಟ್ನೆ, ಶಿವಕುಮಾರ ಸ್ವಾಮಿ ಮಾತನಾಡಿದರು. ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟನೆ ಮಾಡಿದರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಧ್ವಜಾರೋಹಣ ನೆರವೇರಿಸಿದರು. ಹಾಗೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಬಸವಗುರು ಪೂಜೆ ನೆರವೇರಿಸಿದರು.

ವೇದಿಕೆಯಲ್ಲಿ ಜಗದ್ಗುರು ಬಸವಕುಮಾರ ಸ್ವಾಮೀಜಿ, ಸದ್ಗುರು ಅನಿಮಿಷಾನಂದ ಸ್ವಾಮೀಜಿ, ಶಂಕ್ರೆಪ್ಪ ಪಾಟೀಲ್‌, ಸುಧೀರ ಕಾಡಾದಿ, ಬಾಬು ವಾಲಿ, ಸುರೇಶ ಚನಶೆಟ್ಟಿ, ಎಸ್‌ಬಿ ಜೋಡಹಳ್ಳಿ, ರಮೇಶ ಮಠಪತಿ, ಸಿಎಸ್‌ ಗಣಾಚಾರಿ, ಸಿಎಸ್‌ ಪಾಟೀಲ್‌, ಚನ್ನಬಸವ ಹಂಗರಗಿ, ಜೈರಾಜ ಬುಕ್ಕಾ, ಮಹಾಲಿಂಗಪ್ಪ ಬೆಲ್ದಾಳೆ ಸೇರಿದಂತೆ ಮತ್ತಿತರಿದ್ದರು. ಶ್ರೀಕಾಂತ ಭುರಾಳೆ ಸ್ವಾಗತಿಸಿ ಜೆ.ಕೆ ಸ್ವಾಮಿ ಹಾಗೂ ಸುರೇಶ ಸ್ವಾಮಿ ನಿರೂಪಿಸಿದರು. ವಿಶಾಲ ಪಾಟೀಲ್‌ ವಂದಿಸಿದರು.

ಕೆಲವರ ಕುತಂತ್ರದಿಂದಾಗಿ ಪ್ರತ್ಯೇಕ ಧರ್ಮಕ್ಕೆ ಹಿನ್ನಡೆ

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂದು ಹೋರಾಟಗಳು ನಡೆದವು ಆದರೆ ಕೆಲವರ ಕುತಂತ್ರದಿಂದಾಗಿ ಇದಕ್ಕೆ ಹಿನ್ನಡೆಯಾಗಿದೆ ಆದರೆ ರಾಜ್ಯ ಸರ್ಕಾರ ವಿಶ್ವಮಾನ್ಯ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ ಅವರು ವಿಶ್ವದ ಸಾಂಸ್ಕೃತಿಕ ನಾಯಕನಾಗುವ ಕಾಲ ದೂರವಿಲ್ಲ ಎಂದಯ ಖ್ಯಾತ ಚಿಂತಕ ಆರ್‌.ಕೆ. ಹುಡಗಿ ಹೇಳಿದರು.